ವಿಷಸೇವಿಸಿ ವೃದ್ಧ ಆತ್ಮಹತ್ಯೆ
ಮುಂಡಗೋಡ, ನ.26: ಜೀವನದಲ್ಲಿ ಜಿಗುಪ್ಸೆಗೊಂಡು ವೃದ್ಧರೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಇಂದೂರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ತಾಲೂಕಿನ ಇಂದೂರ ಗ್ರಾಮದ ಪೀರ್‌ಸಾಬ್ ಮರ್ದಾನ್‌ಸಾಬ್ ತಡಸ (65) ಎಂದು ಗುರುತಿಸಲಾಗಿದೆ. ಶುಕ್ರವಾರ ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಸೇವಿಸಿ ಅಸ್ವಸ್ಥನಾಗಿದ್ದ ಇವರು ಮುಂಡಗೋಡ ಸರಕಾರಿ ಆಸ್ಪತ್ರೆ ಕರೆತರುವ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಒಣಹುಲ್ಲಿಗೆ ಆಕಸ್ಮಿಕ ಬೆಂಕಿ: ರೈತರಿಗೆ ಹಾನಿ
ಮುಂಡಗೋಡ, ನ.26: ತಾಲೂಕಿನ ನಾಗನೂರ ಪಂಚಾಯತ್ ವ್ಯಾಪ್ತಿಯ ಹನಮಾಪೂರ ಗ್ರಾಮದಲ್ಲಿ ಒಣಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗಲಿ ಸುಮಾರು 70 ಸಾವಿರ ರೂ. ಹಾನಿಯಾದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಶೇಕಪ್ಪ ಪೂಜಾರ ಬಂಗಾರಪ್ಪಾ ಬಸಾಪೂರ ಮತ್ತು ಶಂಕರಪ್ಪಾಬಸಾಪೂರ ಎಂಬ ರೈತರಿಗೆ ಸೇರಿದ ಹುಲ್ಲಿಗೆ, ಅರಣ್ಯ ಪ್ರದೇಶದಲ್ಲಿ ಹತ್ತಿಕೊಂಡಿದ್ದ ಬೆಂಕಿ ಗಾಳಿಯಿಂದ ಬಂದು ಹುಲ್ಲಿಗೆ ತಾಗಿದೆ ಎಂದು ಹೇಳಲಾಗಿದೆ. ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.





