ನಿರಂತರ ಕೊಳವೆಬಾವಿ ಕೊರೆತದಿಂದ ಜಲಮೂಲ ಬತ್ತುವ ಅಪಾಯ: ಸಚಿವ ಕಾಗೋಡು
ಕೊಳವೆಬಾವಿ ಕೊರೆಯುವುದಕ್ಕೆ ನಿಷೇಧ

ಸಾಗರ, ನ.26: ವಿಪರೀತ ಕೊಳವೆಬಾವಿ ಕೊರೆಯು ತ್ತಿರುವುದರಿಂದ ಅಂತರ್ಜಲ ಬತ್ತುತ್ತಿದೆ. ಇದರಿಂದ ಕೊಳವೆಬಾವಿ ಕೊರೆಯುವುದನ್ನು ಕಡ್ಡಾಯ ನಿಷೇಧಿ ಸುವ ನಿಟ್ಟಿನಲ್ಲಿ ಸರಕಾರ ಗಂಭೀರ ನಿರ್ಧಾರ ಕೈಗೊಂಡಿದೆ ಎಂದು ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ತಾಲೂಕಿನ ಹೊಸಗುಂದದಲ್ಲಿ ಶನಿವಾರ ನಬಾರ್ಡ್-20 ಯೋಜನೆಯಡಿ 53 ಲಕ್ಷ ರೂ. ವೆಚ್ಚದಲ್ಲಿ ಹೊಸ ಗುಂದ ಕೆರೆಏರಿಯಿಂದ ಊರೊಳಗಿನ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು. ನೀರಿಗಾಗಿ ಕೊಳವೆಬಾವಿಗಳನ್ನು ಕೊರೆಯುವ ಪ್ರಕರಣ ನಮ್ಮ ಜಿಲ್ಲೆಯೂ ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲಿ ನಡೆಯುತ್ತಿದೆ.
ಪರಿಸ್ಥಿತಿ ಹೀಗೆ ಮುಂದುವರಿದರೆ ಜಲಮೂಲ ಬತ್ತುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಕೊಳವೆಬಾವಿ ಕೊರೆಯುವುದ್ನು ನಿಷೇಧಿಸಿದೆ. ಜನರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ರಾಜ್ಯದ ಬರಪೀಡಿತ ತಾಲೂಕುಗಳಿಗೆ 60 ಲಕ್ಷ ರೂ. ಹಾಗೂ ಇತರೆ ತಾಲೂಕುಗಳಿಗೆ 40 ಲಕ್ಷ ರೂ. ಸರಕಾರ ಬಿಡುಗಡೆ ಮಾಡಿದೆ. ಈ ಹಣವನ್ನು ಕುಡಿಯುವ ನೀರಿನ ಕಾಮಗಾರಿಗೆ ಬಳಕೆ ಮಾಡುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.
ರವಿವಾರ ಸಾಗರ ಹಾಗೂ ಹೊಸನಗರದಲ್ಲಿ ಬರದಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು. ಕಣ್ಣೂರು-ದಣಂದೂರು 3 ಕಿ.ಮೀ. ರಸ್ತೆಗೆ 83 ಲಕ್ಷ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಚನ್ನಶೆಟ್ಟಿಕೊಪ್ಪ ಹೊಳೆಗೆ ತಡೆಗೋಡೆ ನಿರ್ಮಾಣಕ್ಕೆ 1 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿ ಪ್ರಾರಂಭಗೊಂಡಿದೆ.
ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಉದ್ಯೋಗಖಾತ್ರಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು ಎನ್ನುವ ಉದ್ದೇಶದಿಂದ ಜಾರಿಗೆ ಬಂದ ಯೋಜನೆ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಜನರು ಆಸಕ್ತಿ ತೋರಿಸುತ್ತಿಲ್ಲ. ಬರಗಾಲದ ಸಂದರ್ಭದಲ್ಲಿ ಉದ್ಯೋಗಖಾತ್ರಿ ಯೋಜನೆಯನ್ನು ಹೆಚ್ಚು ಬಳಸಿಕೊಳ್ಳುವ ಮೂಲಕ ಆರ್ಥಿಕ ಸ್ಥಿತಿ ಉತ್ತಮ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಸದಸ್ಯೆ ಜ್ಯೋತಿ ಮುರಳಿಧರ್, ಜಿಪಂ ಸದಸ್ಯೆ ಅನಿತಾಕುಮಾರಿ, ಮಾಜಿ ಸದಸ್ಯ ರತ್ನಾಕರ ಹೊನಗೋಡು, ಹೊಸೂರು ಗ್ರಾಪಂ ಅಧ್ಯಕ್ಷೆ ಕೃಷ್ಣವೇಣಿ, ಡಾ. ರಾಜನಂದಿನಿ ಕಾಗೋಡು, ಕೆ.ಹೊಳೆಯಪ್ಪ, ಕೆ.ಎಲ್.ಭೋಜರಾಜ್ ಇನ್ನಿತರರು ಹಾಜರಿದ್ದರು.
ಕೊಳವೆ ಬಾವಿ ಕೊರೆಯಲು ನಿಷೇಧಿಸಿರುವುದು ಖಂಡನೀಯ: ಶಾಸಕ ಮಧು ಬಂಗಾರಪ್ಪ
ಸೊರಬ, ನ.26: ಬರದ ಪರಿಸ್ಥಿತಿಯಲ್ಲಿ ರೈತರ ಜವಿುೀನುಗಳಿಗೆ ನೀರು ಪೂರೈಸದ ಸರಕಾರ ಕೊಳವೆ ಬಾವಿ ಕೊರಸದಿರುವುದರ ಬಗ್ಗೆ ಆದೇಶ ಹೊರಡಿಸಿರುವುದು ಖಂಡನೀಯ ಎಂದು ಶಾಸಕ ಮಧು ಬಂಗಾರಪ್ಪ ಕಟುವಾಗಿ ನುಡಿದರು.
ಶನಿವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಆವರಿಸಿದ್ದು, ಈಗಾಗಲೇ ನದಿ, ಕೆರೆ-ಕಟ್ಟೆಗಳು ಬತ್ತಿ ಹೋಗಿವೆ. ಕೊಳವೆ ಬಾವಿ ಕೊರೆಯಿಸಿ ರೈತರ ಜಮೀನು ಹಾಗೂ ಸಾರ್ವಜನಿಕರಿಗೆ ತುರ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇಂತಹ ರೈತೋಪಯೋಗಿ ಕಾನೂನುಗಳನ್ನು ಜಾರಿಗೊಳಿಸದ ಸರಕಾರ ಕೊಳವೆ ಬಾವಿಗಳನ್ನು ಕೊರಸದಿರುವಂತೆ ಜಿಲ್ಲಾಧಿಕಾರಿಗಳ ಮೂಲಕ ಆದೇಶ ಹೊರಡಿಸಿರುವುದು ಸರಿಯಾದ ಕ್ರಮವಲ್ಲ ಎಂದರು.
ರೈತರು ತಾವು ಬೆಳೆದ ಅಲ್ಪಸ್ವಲ್ಪ ಬೆಳೆಗಳನ್ನು ಉಳಿಸಿಕೊಳ್ಳಲು ತಮ್ಮ ಸ್ವಂತ ಖರ್ಚಿನಲ್ಲೇ ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಬರಬೇಕಾದ ಸರಕಾರ ರೈತ ವಿರೋಧಿ ಕಾನೂನು ತರುತ್ತಿದೆ. ಕಾನೂನು ಪಾಲನೆ ಪ್ರತಿಯೊಬ್ಬರ ಕರ್ತವ್ಯ. ಆದರೆ ಜನವಿರೋಧಿ ಕಾನೂನು ತಂದಾಗ ಒಬ್ಬ ಜನಪ್ರತಿನಿಧಿಯಾದ ತಾನು ಇಂತವುಗಳನ್ನು ಧಿಕ್ಕರಿಸಿ, ರೈತರ ರಕ್ಷಣೆಗೆ ಮುಂದಾಗುತ್ತೇನೆ ಎಂದ ಅವರು, ಸರಕಾರ ಕೂಡಲೇ ಈ ಆದೇಶವನ್ನು ಹಿಂಪಡೆಯಬೇಕು. ಬರಗಾಲದಿಂದ ಕಂಗೆಟ್ಟಿರುವ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.
ಸುದ್ಧಿಗೋಷ್ಠಿಯಲ್ಲಿ ಬ್ಲಾಕ್ ಅಧ್ಯಕ್ಷರಾದ ಎಚ್. ಗಣಪತಿ, ಕೆ.ಪಿ. ರುದ್ರಗೌಡ, ಜಿಪಂ. ಸದಸ್ಯ ಶಿವಲಿಂಗೇಗೌಡ, ತಾಪಂ. ಸದಸ್ಯ ನಾಗರಾಜ, ಪ್ರಮುಖರಾದ ಸುರೇಶ್, ಜಯಶೀಲಗೌಡ್ರು ಅಂಕರವಳ್ಳಿ, ಯಲಸಿ ಹನುಮಂತಪ್ಪ ಮೊದಲಾದವರು ಇದ್ದರು.







