ಕ್ರಾಂತಿಯ ಸಂಕೇತವಾದ ಕಾನೂನು ವಿದ್ಯಾರ್ಥಿ ಕ್ಯಾಸ್ಟ್ರೋ

ಭದ್ರ ಪ್ರಾಥಮಿಕ ಹಾಗೂ ಮಾಧ್ಯಮಿಕ ಯಹೂದಿ ಶಿಕ್ಷಣ ಪಡೆದ ಫಿಡೆಲ್ ಕ್ಯಾಸ್ಟ್ರೊ, ಆ ಬಳಿಕ ಹವಾನಾ ವಿಶ್ವವಿದ್ಯಾನಿಲಯದಲ್ಲಿ ಕಾನೂನು ಅಭ್ಯಾಸ ಮಾಡಿದರು. 1950ರಲ್ಲಿ ನಾಗರಿಕ ಕಾನೂನು ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದರು. ಅವರ ಎಡಪಂಥೀಯ ವಿಚಾರಧಾರೆ ಅವರನ್ನು ಸಮಾಜವಾದಿ ಚಳವಳಿಯತ್ತ ಆಕರ್ಷಿಸಿತು. ಕ್ಯೂಬನ್ ಪೀಪಲ್ಸ್ ಪಾರ್ಟಿಯ ಅತ್ಯಂತ ಸಕ್ರಿಯ ಸದಸ್ಯರಾಗಿದ್ದ ಅವರು, ರಫೆಲ್ ಲಿಯೊನಿಡಾಸ್ ಟ್ರುಜಿಲೊ ವಿರುದ್ಧ ಡೊಮೆನಿಕನ್ ರಿಪಬ್ಲಿಕ್‌ನಲ್ಲಿ ನಡೆದ ದಂಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಕ್ಯೂಬಾದಲ್ಲಿ ಕ್ಯಾಸ್ಟ್ರೊ, ಅಮೆರಿಕ ಸರಕಾರದ ಪರವಾಗಿದ್ದ ಪುಲ್ಗಾನ್ಸಿಯೊ ಬಟಿಸ್ಟಾ ವಿರುದ್ಧದ ಚಳವಳಿಯ ನೇತೃತ್ವ ವಹಿಸಿದ್ದರು. ಸ್ಯಾಂಟಿಯಾಗೊ ಡೆ ಕ್ಯೂಬಾದಲ್ಲಿ ಮಾಂಕಡಾ ಬಾರಕ್ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದರೂ ಅದರಲ್ಲಿ ವಿಫಲರಾದರು. ಇದರ ಪರಿಣಾಮವಾಗಿ ವಿಚಾರಣೆ ಎದುರಿಸಬೇಕಾಯಿತು. ವಿಚಾರಣೆ ವೇಳೆ ಅವರು ತಮ್ಮ ನಿಲುವನ್ನು ಬಲವಾಗಿ ಸಮರ್ಥಿಸಿಕೊಂಡರು. ಕ್ಯಾಸ್ಟ್ರೊ 15 ವರ್ಷ ಜೈಲು ಶಿಕ್ಷೆಗೆ ಗುರಿಯಾದರು. ಆದರೆ ನ್ಯಾಯಾಲಯ ನೀಡಿದ ಕ್ಷಮಾದಾನದಿಂದಾಗಿ ಕೇವಲ ಎರಡೇ ವರ್ಷಕ್ಕೆ ಅವರ ಸೆರೆಮನೆ ವಾಸ ಅಂತ್ಯವಾಯಿತು. ಜೈಲಿನಿಂದ ಬಿಡುಗಡೆಯಾದ ಬಳಿಕ ಅವರನ್ನು ಮೆಕ್ಸಿಕೋಗೆ ಗಡಿಪಾರು ಮಾಡಲಾಯಿತು. ಅಲ್ಲಿ ಅವರು ಎರ್ನೆಸ್ಟೊ ಚೆ ಗುವೇರಾ ಅವರನ್ನು ಭೇಟಿ ಮಾಡಿದರು. ಇಬ್ಬರೂ ಜತೆಯಾಗಿ ಕ್ಯೂಬಾ ಕ್ರಾಂತಿಗೆ ಭದ್ರವಾದ ಬುನಾದಿ ಹಾಕಿದರು.
ಕ್ಯಾಸ್ಟ್ರೊ ಹಾಗೂ 80 ಮಂದಿ ಮೆಕ್ಸಿಕೋದಿಂದ ಗ್ರಾನ್ಮಾ ಹಡಗಿನ ಮೂಲಕ ಐತಿಹಾಸಿಕ ಪ್ರಯಾಣ ಕೈಗೊಂಡರು. ಇದು ಈಗಲೂ ಹವಾನದಲ್ಲಿರುವ ಕ್ರಾಂತಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕಿದೆ. ಎರಡು ವರ್ಷ ಕಾಲ ಬೆಟ್ಟಗುಡ್ಡಗಳಲ್ಲಿ ವಾಸವಿದ್ದ ಅವರು, ಈ ಅವಧಿಯಲ್ಲಿ ತಮ್ಮ ಬೆಂಬಲಿಗರಿಗೆ ತರಬೇತಿ ನೀಡಿದರು. ಹಾಗೂ ಆಡಳಿತದ ವಿರುದ್ಧ ಅಸಮಾಧಾನ ಹೊಂದಿದ್ದ ರೈತರು ಹಾಗೂ ಕಾರ್ಮಿಕರು ಸೇರಿದಂತೆ ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಕಲೆ ಹಾಕಿದರು. ಕ್ಯಾಸ್ಟ್ರೊ ಅವರ ಚಳವಳಿ ಎಂಟು ವಿಭಿನ್ನ ಪ್ರದೇಶಗಳ ಮೂಲಕ ವಿಸ್ತಾರವಾಗುತ್ತಾ ಹೋಯಿತು. ಬಟಿಸ್ಟಾ ಆಡಳಿತ ಇದನ್ನು ಹತ್ತಿಕ್ಕುವುದು ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಯಿತು. ಕ್ರಮೇಣ ಇವರು ಹವಾನಾ ವಶಪಡಿಸಿಕೊಂಡರು, ಕ್ಯಾಸ್ಟ್ರೊ ಆ ಬಳಿಕ ಸಶಸ್ತ್ರ ಪಡೆಗಳ ಕಮಾಂಡರ್ ಇನ್ ಚೀಫ್ ಆಗಿ ನೇಮಕಗೊಂಡರು.
ಕ್ಯಾಸ್ಟ್ರೊ ಬೇಸ್‌ಬಾಲ್‌ನಲ್ಲಿ ಹೊಂದಿದ್ದ ಅತೀವವಾದ ಪ್ರೀತಿ ಅಮೆರಿಕದಲ್ಲಿ ಜನಜನಿತ. ಖ್ಯಾತ ಬೇಸ್‌ಬಾಲ್ ಆಟಗಾರ ಡಾನ್ ಹಾಕ್ ಅವರು ‘ದ ಡೇ ಐ ಬ್ಯಾಟಲ್ಡ್ ಅಗೆನೆಸ್ಟ್ ಕ್ಯಾಸ್ಟ್ರೊ’ ಎಂಬ ಲೇಖನ ಪ್ರಕಟಿಸಿದಾಗ ಇದು ಮೊಟ್ಟಮೊದಲ ಬಾರಿಗೆ ಬಹಿರಂಗವಾಯಿತು.
ಕ್ಯಾಸ್ಟ್ರೊ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮೊಟ್ಟಮೊದಲ ಬಾರಿಗೆ ಮಾತನಾಡಿದ್ದು, ವಿಶ್ವಸಂಸ್ಥೆಯ ಸಾಮಾನ್ಯಸಭೆಯಲ್ಲಿ 1960ರಲ್ಲಿ. ಈ ಸಾಮಾನ್ಯ ಸಭೆ ಅಧಿವೇಶನದಲ್ಲಿ ಅವರು ಸುಮಾರು ಎರಡು ಗಂಟೆಗಳ ಸುದೀರ್ಘ ಭಾಷಣದ ಮೂಲಕ ವಿಶ್ವದ ಗಮನ ಸೆಳೆದರು. ಅಂತಿಮವಾಗಿ ಕ್ಯಾಸ್ಟ್ರೊ ಸಂಕ್ಷಿಪ್ತವಾಗಿ ಕ್ಯೂಬಾದ ನ್ಯಾಷನಲ್ ಜನರಲ್ ಅಸೆಂಬ್ಲಿಯು, ಜನರು ಜನರನ್ನು ಶೋಷಿಸುವುದನ್ನು ಖಂಡಿಸುತ್ತದೆ ಮತ್ತು ಅಭಿವೃದ್ಧಿಶೀಲ ದೇಶಗಳನ್ನು ಸಾಮ್ರಾಜ್ಯಶಾಹಿ ಮನೋಭಾವದ ಬಲಪಂಥೀಯ ಬಂಡವಾಳಶಾಹಿಗಳು ಶೋಷಿಸುವುದನ್ನು ಖಂಡಿಸುತ್ತದೆ. ಇದಕ್ಕಾಗಿ ಇಂಥ ಸಾಮ್ರಾಜ್ಯಶಾಹಿ ದಾಳಿಯ ವಿರುದ್ಧ ಜನರನ್ನು ರಕ್ಷಿಸಲು ಸಶಸ್ತ್ರ ತರಬೇತಿ ನೀಡಿ ಜನರನ್ನು ಸಜ್ಜುಗೊಳಿಸುವುದು ಅನಿವಾರ್ಯವಾಗಿದೆ. ಇಂಥ ದೇಶಗಳ ರೈತರು, ವಿದ್ಯಾರ್ಥಿಗಳು, ಬುದ್ಧಿಜೀವಿಗಳು, ನೀಗ್ರೊಗಳು, ಭಾರತೀಯರು, ಮಹಿಳೆಯರು, ಯುವಕರು, ವೃದ್ಧರು, ಎಲ್ಲಾ ದುರ್ಬಲ ಹಾಗೂ ಶೋಷಿತರನ್ನು ಒಗ್ಗೂಡಿಸಿ, ಅವರು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಮತ್ತು ಅವರ ಭವಿಷ್ಯವನ್ನು ಅವರು ರಕ್ಷಿಸಿಕೊಳ್ಳಲು ಸಜ್ಜುಗೊಳಿಸಬೇಕಾಗುತ್ತದೆ ಎಂದು ಹೇಳಿದ್ದರು.
2006ರಲ್ಲಿ ಬ್ರಿಟನ್‌ನ ಚಾನಲ್-4, ಕ್ಯಾಸ್ಟ್ರೊ ಅವರ ಕುರಿತ ಸಾಕ್ಷ್ಯ ಚಿತ್ರವನ್ನು ಮೊಟ್ಟಮೊದಲ ಬಾರಿಗೆ ಪ್ರಸಾರ ಮಾಡಿತು. ಇದರಲ್ಲಿ ಕ್ಯಾಸ್ಟ್ರೊ ಹೇಗೆ ಹಲವು ಬಾರಿ ಹತ್ಯೆಯ ಪ್ರಯತ್ನದಿಂದ ಬಚಾವಾಗಿ ಉಳಿದುಕೊಂಡರು ಎನ್ನುವ ರೋಚಕ ಅಂಶಗಳು ಒಳಗೊಂಡಿದ್ದವು. ಈ ಕ್ಯೂಬಾ ನಾಯಕನನ್ನು ಹತ್ಯೆ ಮಾಡಲು ಯಾವೆಲ್ಲಾ ವಿಭಿನ್ನ ತಂತ್ರಗಳನ್ನು ಅನುಸರಿಸಲಾಯಿತು ಎಂದು ಇದು ಬಣ್ಣಿಸಿತು. ಸಿಗಾರ್ ಸ್ಫೋಟದಿಂದ ಹಿಡಿದು, ಪೆನ್ನಿನ ರೂಪದಲ್ಲಿ ವಿಷಪೂರಿತ ಸಿರಿಂಜ್ ನೀಡಿದ್ದನ್ನು ಈ ಚಿತ್ರದಲ್ಲಿ ವಿವರಿಸಲಾಗಿತ್ತು.
ಆರಂಭಿಕ ಹಂತದಲ್ಲಿ ಅವರು ಆರಿಸಿಕೊಂಡಿದ್ದ ಓಲಿವ್ ಹಸಿರು ಸಮವಸ್ತ್ರದಿಂದ ಹಿಡಿದು ಕೊನೆಯ ವರ್ಷಗಳಲ್ಲಿ ಧರಿಸುತ್ತಿದ್ದ ಟ್ರ್ಯಾಕ್‌ಸೂಟ್‌ವರೆಗೆ, ದಿರಸಿನ ಬಗೆಗೆ ಎಂದೂ ಕ್ಯಾಸ್ಟ್ರೊ ತಲೆಕೆಡಿಸಿಕೊಂಡವರಲ್ಲ. ನೆಲ್ಸನ್ ಮಂಡೇಲಾ ಅವರ ವರ್ಣರಂಜಿತ ಅಂಗಿ ಅಥವಾ ಚೆ ಗುವೇರಾ ಅವರ ಸಿಗ್ನೇಚರ್ ಹ್ಯಾಟ್ ಬದಲು ಕ್ಯಾಸ್ಟ್ರೊ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಅನುಗುಣವಾದ ಸರಳ ಉಡುಗೆಯನ್ನೇ ಮುಂದುವರಿಸಿದರು.
ಸೋವಿಯತ್ ಯುಗದ ಇತರ ಕಮ್ಯುನಿಸ್ಟ್ ನಾಯಕರಿಗಿಂತ ಭಿನ್ನವಾಗಿ, ಕ್ಯಾಸ್ಟ್ರೊ ಎಂದಿಗೂ ವ್ಯಕ್ತಿತ್ವದ ವೈಭವೀಕರಣಕ್ಕೆ ಮುಂದಾಗಲಿಲ್ಲ. ವರ್ಷಗಳು ಕಳೆದಂತೆ ಕ್ಯಾಸ್ಟ್ರೊ, ಎಲ್ಲ ಮಳಿಗೆ, ತರಗತಿ ಹಾಗೂ ಟ್ಯಾಕ್ಸಿಗಳಲ್ಲಿ ಕೂಡಾ ಕಾಣಿಸಿಕೊಳ್ಳುವಂತಾಯಿತು. ಎಲ್ ಕಬಾಲೊ(ಕುದುರೆ) ಸೇರಿದಂತೆ ಹಲವು ಅಡ್ಡಹೆಸರುಗಳು ಕೂಡಾ ಬಳಕೆಯಲ್ಲಿ ಬಂದವು. 1950 ಹಾಗೂ 60ರ ದಶಕದಲ್ಲಿ ಅವರ ಮಹಿಳಾಪರ ಒಲವಿನ ಕಾರಣದಿಂದ ಎಲ್ ಜಾಪೆ (ಮುಖ್ಯಸ್ಥ) ಎಂದೂ ಕರೆಸಿಕೊಂಡರು.
ಫಿಡೆಲ್ ಕ್ಯಾಸ್ಟ್ರೊ ಅವರು ಅತ್ಯಾಕರ್ಷಕ ಚಿತ್ರಣವೆಂದರೆ, ಕ್ಯೂಬನ್ ಸಿಗಾರ್ ಸೇದುವ ಭಂಗಿ. ಸಿಗಾರ್‌ಗಳು ಕ್ಯೂಬನ್ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡಿವೆ. ಇವು ದೇಶದ ಪ್ರಮುಖ ರಫ್ತ್ತು ಉತ್ಪನ್ನಗಳಲ್ಲೊಂದು. ವಿಶ್ವಾದ್ಯಂತ ಇದು ಐಷಾರಾಮಿ ವಸ್ತುವಾಗಿ ಮಾರಾಟವಾಗುತ್ತದೆ.
ಕ್ಯಾಸ್ಟ್ರೊ ಶಿಕ್ಷಣಕ್ಕೆ ವಿಶೇಷ ಮಹತ್ವ ನೀಡಿದ್ದರು. ಅವರು ಮೊದಲ ಬಾರಿ ಅಧಿಕಾರಕ್ಕೆ ಬಂದಾಗ ಅವರು ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದರು. ಕ್ಯೂಬಾದ ಸಾಕ್ಷರತಾ ಆಂದೋಲನದಡಿ, ಸಾಕ್ಷರತಾ ಬ್ರಿಗೇಡ್‌ಗಳನ್ನು ರಚಿಸಿ ದೇಶಾದ್ಯಂತ ಶಾಲೆಗಳನ್ನು ನಿರ್ಮಿಸಲಾಯಿತು. ಹೊಸ ಬೋಧಕರನ್ನು ತರಬೇತುಗೊಳಿಸಲಾಯಿತು. ಅನಕ್ಷರಸ್ಥರಿಗೆ ಓದುವುದು, ಬರೆಯುವುದು ಕಲಿಸಲಾಯಿತು. ಈ ಅಭಿಯಾನದ ಮುಕ್ತಾಯದ ವೇಳೆಗೆ, ಸುಮಾರು 7.07 ಲಕ್ಷ ವಯಸ್ಕರು ಓದುವುದು ಹಾಗೂ ಬರೆಯುವುದು ಕಲಿತದ್ದು ದಾಖಲಾಗಿದೆ. ಇದರಿಂದಾಗಿ ದೇಶದ ಸಾಕ್ಷರತೆ ಪ್ರಮಾಣ ಶೇ.96ಕ್ಕೆ ಹೆಚ್ಚಿತು.ಕ್ಯಾಸ್ಟ್ರೊ ಅವರ ಕಮ್ಯುನಿಸ್ಟ್ ಆದರ್ಶಗಳು ಅವರನ್ನು ಕ್ಯೂಬಾದ ಏಕೈಕ ಮಾನ್ಯತೆ ಪಡೆದ ರಾಜಕೀಯ ಪಕ್ಷದ ರಚನೆಗೆ ಮುಂದಾಗುವಂತೆ ಮಾಡಿತು. ಕ್ಯಾಸ್ಟ್ರೊ ಸ್ಥಾಪಿಸಿದ ಕ್ಯೂಬಾ ಕಮ್ಯುನಿಸ್ಟ್ ಪಕ್ಷದಲ್ಲಿ ಸ್ವತಃ ಅವರು ಮೊಟ್ಟಮೊದಲ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅವರು ತಮ್ಮ ಅಧಿಕಾರವನ್ನು ಸಹೋದರ ರವೂಲ್ ಅವರಿಗೆ ಹಸ್ತಾಂತರಿಸುವ ವರೆಗೂ ಆ ಹುದ್ದೆಯಲ್ಲಿ ಮುಂದುವರಿದರು. ಈ ಪಕ್ಷವು ರಶ್ಯ ಮಾದರಿಯಲ್ಲಿ ಅತ್ಯಂತ ಕಟ್ಟುನಿಟ್ಟಿನ ಮಾರ್ಕ್ಸ್‌ವಾದಿ, ಲೆನಿನ್‌ವಾದಿ ಆದರ್ಶಗಳನ್ನು ಇಂದಿಗೂ ಪಾಲಿಸುತ್ತಾ ಬಂದಿದೆ.







