ಮದುವೆಯ ರಾತ್ರಿಯೇ ಮದುಮಗಳ ಮೇಲೆ ಆ್ಯಸಿಡ್ ದಾಳಿ
ಬರೇಲಿ,ನ.26: ಇಲ್ಲಿಯ ದಂಡುಪ್ರದೇಶದಲ್ಲಿ ಇಬ್ಬರು ಮಹಿಳೆಯರು ಮದುವೆಯ ರಾತ್ರಿ ಮದುಮಗಳ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿರುವ ಮದುಮಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ರಾತ್ರಿ ಇಲ್ಲಿಯ ಯುಗ್ವಿನಾ ಲೈಬ್ರರಿ ಕಾಂಪೌಂಡ್‌ನಲ್ಲಿ ಮದುವೆಯ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಮದುವೆ ವಿಧಿಗಳು ಇನ್ನೇನು ಪ್ರಾರಂಭಗೊಳ್ಳಲಿದ್ದವು. ಅಲಂಕೃತ ಮದುಮಗಳು ತನ್ನ ಕೋಣೆಯಲ್ಲಿದ್ದಳು. ಅಜ್ಜಿ ಮಾತ್ರ ಆಕೆಯ ಜೊತೆಯಲ್ಲಿದ್ದು, ಉಳಿದವರೆಲ್ಲ ಹೊರಗೆ ಕಾಂಪೌಂಡ್‌ನಲ್ಲಿದ್ದರು.
ಈ ಸಂದರ್ಭ ಮಹಿಳೆಯರಿಬ್ಬರು ಮದುಮಗಳ ಕೋಣೆಗೆ ನುಗ್ಗಿದ್ದು, ಒಬ್ಬಳು ಆಕೆಯನ್ನು ಬಿಗಿಯಾಗಿ ಹಿಡಿದುಕೊಂಡಿದ್ದರೆ, ಇನ್ನೊಬ್ಬಳು ಮೈಮೇಲೆ ಆ್ಯಸಿಡ್ ಸುರಿದಿದ್ದಳು. ಬಳಿಕ ಕೋಣೆಯನ್ನು ಹೊರಗಿನಿಂದ ಭದ್ರಪಡಿಸಿ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ.
ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಕೋನಗಳಿಂದಲೂ ತನಿಖೆಯನ್ನು ನಡೆಸುತ್ತಿದ್ದಾರೆ.
Next Story





