ಜಿಎಸ್‌ಟಿ ಅನುಷ್ಠಾನದಿಂದ ತೆರಿಗೆ ಆದಾಯ ನಷ್ಟವಾದರೆ ರಾಜ್ಯಗಳಿಗೆ ಕೇಂದ್ರದಿಂದ ಪರಿಹಾರ
ಹೊಸದಿಲ್ಲಿ, ನ.26: ಜಿಎಸ್‌ಟಿ ಅನುಷ್ಠಾನದಿಂದ ರಾಜ್ಯಗಳಿಗೆ ಆಗುವ ತೆರಿಗೆ ಆದಾಯ ನಷ್ಟವನ್ನು ಸರಿದೂಗಿಸಲು ಪ್ರತೀ ತ್ರೈಮಾಸಿಕ ಅವಧಿಯ ಅಂತ್ಯಕ್ಕೆ ತಾತ್ಕಾಲಿಕವಾಗಿ ಪರಿಹಾರ ನೀಡಲಾಗುವುದು. ಆದರೆ , ಸಿಎಜಿ(ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು) ವರದಿಯ ಆಧಾರದಲ್ಲಿ ತೆರಿಗೆ ಆದಾಯದ ಅಂತಿಮ ಮೊತ್ತವನ್ನು ವಾರ್ಷಿಕವಾಗಿ ನಿರ್ಧರಿಸಲಾಗುತ್ತದೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಆರಂಭದ ಐದು ವರ್ಷಗಳಲ್ಲಿ 'ಜಿಎಸ್‌ಟಿ ಪರಿಹಾರ ತೆರಿಗೆ' ಎಂಬ ಹೆಸರಿನಲ್ಲಿ ಈ ಪರಿಹಾರ ತೆರಿಗೆಯ ಬಾಬ್ತನ್ನು ಸರಿಹೊಂದಿಸಲಾಗುತ್ತದೆ. ತಂಬಾಕು ಮತ್ತಿತರ ಉತ್ಪನ್ನಗಳು, ಐಷಾರಾಮಿ ವಸ್ತುಗಳ ಮೇಲೆ ಉಪತೆರಿಗೆ ವಿಧಿಸಲು 'ಜಿಎಸ್‌ಟಿ ಪರಿಹಾರ ತೆರಿಗೆ'ಯಲ್ಲಿ ಅವಕಾಶವಿದೆ. 'ಜಿಎಸ್‌ಟಿ ಪರಿಹಾರ ನಿಧಿ'ಯನ್ನು ಸ್ಥಾಪಿಸಿ ಐದು ವರ್ಷಗಳ ಬಳಿಕ ಇದರಲ್ಲಿ ಹೆಚ್ಚುವರಿಯಾಗಿ ಸಂಗ್ರಹಗೊಂಡ ಮೊತ್ತವನ್ನು ಕೇಂದ್ರ ಮತ್ತು ರಾಜ್ಯಗಳು ಹಂಚಿಕೊಳ್ಳುತ್ತವೆ ಎಂದು ಕೇಂದ್ರ ಸರಕಾರ ಇಂದು ಬಿಡುಗಡೆಗೊಳಿಸಿರುವ ಜಿಎಸ್‌ಟಿ ಪರಿಹಾರ ಕಾಯ್ದೆಯ ಕರಡು ಪ್ರತಿಯಲ್ಲಿ ವಿವರಿಸಲಾಗಿದೆ. ಹೆಚ್ಚುವರಿ ಹಣದ ಶೇ.50ರಷ್ಟು ಮೊತ್ತ 'ಭಾರತದ ಸಂಚಿತ ನಿಧಿ' ಖಾತೆಗೆ ಜಮೆಯಾಗುತ್ತದೆ. ಇದು ತೆರಿಗೆ ಕೂಡುನಿಧಿಯ ಒಂದು ಭಾಗವಾಗಿರುತ್ತದೆ. ಇದನ್ನು ನಿರ್ದಿಷ್ಟ ಪ್ರಮಾಣದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಂಚಿಕೊಳ್ಳುತ್ತವೆ. ತೆರಿಗೆ ಕೂಡುನಿಧಿಯ ಎರಡನೆ ಭಾಗವನ್ನು ರಾಜ್ಯಗಳ ಒಟ್ಟು ತೆರಿಗೆ ಆದಾಯದ ಅನುಪಾತದಲ್ಲಿ ಹಂಚಲಾಗುತ್ತದೆ. ಹೀಗೆ ರಾಜ್ಯಗಳಿಗೆ ನೀಡಲಾದ ಮೊತ್ತವು ಅವುಗಳ ತೆರಿಗೆ ಆದಾಯದ ಅನುಪಾತ ಮಿರಿದೆ ಎಂದು ಸಿಎಜಿ ವರದಿಯಲ್ಲಿ ಕಂಡು ಬಂದರೆ, ಈ ಮೊತ್ತವನ್ನು ಮರುವರ್ಷದ ಪರಿಹಾರ ನಿಧಿಗೆ ಹೊಂದಿಕೆ ಮಾಡಿಕೊಳ್ಳಲಾಗುತ್ತದೆ. ಜಿಎಸ್‌ಟಿ ಕಾಯ್ದೆ ಅನುಷ್ಠಾನಕ್ಕೆ ಬಂದ ಬಳಿಕ ರಾಜ್ಯಗಳು ಸಂಗ್ರಹಿಸುವ ಆದಾಯ ತೆರಿಗೆ ಮೊತ್ತ ಮತ್ತು ಈ ಹಿಂದಿನ ನೇರ ತೆರಿಗೆ ಕಾಯ್ದೆಯಡಿ ರಾಜ್ಯಗಳು ಸಂಗ್ರಹಿಸುತ್ತಿದ್ದ ಮೊತ್ತದ ವ್ಯತ್ಯಾಸವನ್ನು ಆದಾಯ ತೆರಿಗೆ ನಷ್ಟ ಎಂದು ಪರಿಗಣಿಸಲಾಗುತ್ತದೆ.





