ರಾಹುಲ್ ಗಾಂಧಿ ಪ್ರಧಾನಿಯನ್ನು ಪ್ರಶ್ನಿಸಲು 'ಅನರ್ಹ ': ಬಿಜೆಪಿ
ಹೊಸದಿಲ್ಲಿ,ನ.26: ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅನುಪಸ್ಥಿತಿಯನ್ನು ಗೇಲಿ ಮಾಡಿದ್ದಕ್ಕಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಇಂದು ತಿರುಗೇಟು ನೀಡಿದ ಬಿಜೆಪಿಯು, ಲೋಕಸಭೆಯ ಇತಿಹಾಸದಲ್ಲಿಯೇ 'ಅತ್ಯಂತ ಕೆಟ್ಟ ಸಂಸದ ' ಎಂದು ನಿರ್ಧರಿಸಲ್ಪಟ್ಟಿರುವ ಅವರು ಇಂತಹ ಹೇಳಿಕೆಗಳನ್ನು ನೀಡಿರುವುದು ವಿಪರ್ಯಾಸವಾಗಿದೆ ಎಂದು ಕುಟುಕಿದೆ.
ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಜಿವಿಎಲ್ ನರಸಿಂಹ ಅವರು, ರಾಹುಲ್ ಹೆಚ್ಚಿನ ಸಮಯ ಸಂಸತ್ತಿಗೆ ಗೈರುಹಾಜರಾಗುತ್ತಾರೆ. ಸಂಸತ್ತಿನ ಹೊರಗೂ ಅವರು ಅಂತಹ ಘನಕಾರ್ಯದಲ್ಲಿ ತೊಡಗಿರುವುದೇನೂ ಕಂಡುಬರುತ್ತಿಲ್ಲ. ಇಂತಹ ಹೇಳಿಕೆಗಳನ್ನು ನೀಡಲು ಅವರು ನಿಜಕ್ಕೂ ಅರ್ಹರಲ್ಲ. ಹಿಂದಿನ ಲೋಕಸಭಾ ಅವಧಿಯಲ್ಲಿ ಅವರು ಅತ್ಯಂತ ಕೆಟ್ಟ ಸಂಸದರಲ್ಲಿ ಒಬ್ಬರಾಗಿದ್ದರು. ಪ್ರಸಕ್ತ ಅವಧಿ ಯಲ್ಲಿಯೂ ಅವರು ಆ ಪರಂಪರೆಯನ್ನು ಮುಂದುವರಿಸಿದ್ದಾರೆ. ಇಂತಹ ವ್ಯಕ್ತಿ ಪ್ರಧಾನಿಯನ್ನು ಟೀಕಿಸುವುದು ಒಂದು ದೊಡ್ಡ ತಮಾಷೆಯಾಗಿದೆ ಎಂದು ಹೇಳಿದರು.
ಮೋದಿಯವರು ಜನರ ಏಳಿಗೆಗಾಗಿ ಮತ್ತು ದೇಶವನ್ನು ಮರಳಿ ಸರಿದಾರಿಗೆ ತರಲು ಶ್ರಮಿಸುತ್ತಿರುವುದರಿಂದ ಅವರನ್ನು ಟೀಕಿಸುವುದು ರಾಹುಲ್‌ಗೆ ಉಚಿತವಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಮೋದಿಯವರು ಆಡಳಿತದಲ್ಲಿ ಬೃಹತ್ ಪರಿವರ್ತನೆ ಮತ್ತು ಶಿಸ್ತನ್ನು ತಂದಿದ್ದಾರೆ. ಕಾಂಗ್ರೆಸ್ ಪಕ್ಷವು ಅವರ ಉಪಸ್ಥಿತಿಗೆ ಆಗ್ರಹಿಸುವ ಮೊದಲು ಸಂಸದೀಯ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ಮೂಲಪಾಠಗಳನ್ನು ಕಲಿತುಕೊಳ್ಳುವಂತೆ ರಾಹುಲ್‌ಗೆ ಬುದ್ಧಿ ಹೇಳಬೇಕು ಎಂದರು.
ನೋಟು ನಿಷೇಧ ಕುರಿತು ಚರ್ಚೆ ವೇಳೆ ಸಂಸತ್ತಿನಲ್ಲಿ ಮೋದಿ ಅನುಪಸ್ಥಿತಿಯನ್ನು ನಿನ್ನೆ ಗೇಲಿ ಮಾಡಿದ್ದ ರಾಹುಲ್, ಸಂಸತ್ತಿನ ಹೊರಗೆ ಅವರು ವ್ಯಕ್ತಪಡಿಸುವ ಭಾವೋದ್ವೇಗಗಳು ಅವರಲ್ಲಿಯ ಹೆದರಿಕೆಯನ್ನು ಬಹಿರಂಗಗೊಳಿಸಿವೆ, ಹೀಗಾಗಿ ಅವರು ಈಗ ಯಾವ 'ಹೊಸ ಭಾವೋದ್ವೇಗ 'ವನ್ನು ಪ್ರದರ್ಶಿಸಲಿದ್ದಾರೆ ಎನ್ನುವುದನ್ನು ನೋಡಲು ಕಾಯುತ್ತಿದ್ದೇನೆ ಎಂದು ಹೇಳಿದ್ದರು.





