ಅಮೆರಿಕ ಅಧ್ಯಕ್ಷರ ಚುನಾವಣೆ: ಕೆಲವು ರಾಜ್ಯಗಳಲ್ಲಿ ಮರು ಮತ ಎಣಿಕೆ?

ವಾಷಿಂಗ್ಟನ್, ನ.27: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪರಾಜಿತ ಅಭ್ಯರ್ಥಿ ಹಿಲರಿ ಕ್ಲಿಂಟನ್ ನಡುವಿನ ಚುನಾವಣಾ ಕೆಸರೆರಚಾಟ ಮುಂದುವರದಿದೆ. ಹಲವು ರಾಜ್ಯಗಳಲ್ಲಿ ಚುನಾವಣಾ ಅಕ್ರಮಗಳು ನಡೆದಿವೆ ಎನ್ನಲಾದ ಹಿನ್ನೆಲೆಯಲ್ಲಿ ಈ ರಾಜ್ಯಗಳಲ್ಲಿ ಮರುಮತ ಎಣಿಕೆಗೆ ಒತ್ತಾಯಿಸುವುದಾಗಿ ಕ್ಲಿಂಟನ್ ಬೆಂಬಲಿಗರು ಪ್ರಕಟಿಸಿದ್ದಾರೆ. ಈ ಮಧ್ಯೆ ಗ್ರೀನ್ ಪಾರ್ಟಿ ಅಭ್ಯರ್ಥಿ ಜಿಲ್ ಸ್ಟಿಯಾನ್ ಅವರು, ಮರು ಮತ ಎಣಿಕೆಗಾಗಿ ಈಗಾಗಲೇ ಲಕ್ಷಾಂತರ ಡಾಲರ್‌ಗಳನ್ನು ಕ್ರೋಡೀಕರಿಸಿದ್ದಾರೆ.
ಆದರೆ ಮತಗಳ ಹ್ಯಾಕಿಂಗ್ ಬಗ್ಗೆ ಯಾವುದೇ ಪುರಾವೆಗಳು, ಕ್ಲಿಂಟನ್ ಪರ ಪ್ರಚಾರ ತಂಡದ ತನಿಖೆ ವೇಳೆ ಸಿಕ್ಕಿಲ್ಲ ಎಂದು ಮಾರ್ಕ್ ಎಲಿಸ್ ಹೇಳುವುದರೊಂದಿಗೆ ಪಕ್ಷದೊಳಗಿನ ಗೊಂದಲ ಮುಂದುವರಿದಿದೆ.
ಈ ಬಗ್ಗೆ ವಿಸ್ತತ ಪೋಸ್ಟ್ ಮಾಡಿದ ಎಲಿಸ್ ಅವರು, "ಫಲಿತಾಂಶವನ್ನು ನಾವು ಪ್ರಶ್ನಿಸುತ್ತಿಲ್ಲ. ಎಲ್ಲ ಪಕ್ಷಕ್ಕೂ ನ್ಯಾಯ ಸಿಗಬೇಕು ಎನ್ನುವುದು ನಮ್ಮ ಕಳಕಳಿ" ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಚುನಾವಣೆ ಹಾಗೂ ಮತ ಎಣಿಕೆ ಮುಗಿದ ಅಧ್ಯಾಯ. ಆದ್ದರಿಂದ ಮರುಎಣಿಕೆ ಪ್ರಶ್ನೆಯೇ ಇಲ್ಲ ಎಂದು ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
"ಜನ ಮಾತನಾಡಿದ್ದಾರೆ. ಚುನಾವಣೆ ಮುಗಿದಿದೆ. ಸ್ವತಃ ಹಿಲರಿ ಕ್ಲಿಂಟನ್ ಅವರೇ ಮತದಾನದ ದಿನ ರಾತ್ರಿ ನನ್ನನ್ನು ಅಭಿನಂದಿಸಿ ಫಲಿತಾಂಶ ಒಪ್ಪಿಕೊಂಡಿದ್ದಾರೆ. ನಾವು ಫಲಿತಾಂಶವನ್ನು ಸವೀಕರಿಸಲೇಬೇಕು. ಭವಿಷ್ಯದ ಬಗ್ಗೆ ನಾವು ದೃಷ್ಟಿ ಹರಿಸಬೇಕು" ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.





