ನೋಟು ರದ್ದತಿ: ನಾವು ಕೇವಲ ರಿಸರ್ವ್ ಬ್ಯಾಂಕಿನ ಶಿಫಾರಸು ಜಾರಿ ಮಾಡಿದ್ದೇವೆ ಎಂದ ಕೇಂದ್ರ ಸರ್ಕಾರ

ಹೊಸದಿಲ್ಲಿ, ನ.27: ಭಾರತೀಯ ರಿಸರ್ವ್ ಬ್ಯಾಂಕಿನ ಶಿಫಾರಸ್ಸಿಗೆ ಅನುಗುಣವಾಗಿಯೇ 500 ಹಾಗೂ 1000 ರೂಪಾಯಿ ನೋಟುಗಳ ರದ್ದತಿ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ಕೇಂದ್ರ ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
"ಇದು ನೋಟುಗಳ ಅಮಾನ್ಯ ನಿರ್ಧಾರವಲ್ಲ. ಹಾಗೆನ್ನುವುದು ತಪ್ಪಾಗುತ್ತದೆ. ನಮ್ಮ ಸರ್ಕಾರ ಕೇವಲ ಆರ್‌ಬಿಐ ಶಿಫಾರಸ್ಸನ್ನು ಅನುಷ್ಠಾನಗೊಳಿಸಿದೆ. 500 ಹಾಗೂ 1000 ರೂಪಾಯಿ ನೋಟುಗಳ ಕಾನೂನುಬದ್ಧ ಚಲಾವಣೆಯನ್ನು ರದ್ದು ಮಾಡಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ನವೆಂಬರ್ 9ರಂದು 500 ಹಾಗೂ 1000 ರೂಪಾಯಿ ನೋಟುಗಳ ಚಲಾವಣೆ ರದ್ದು ಮಾಡಿದರೂ, ಅಗತ್ಯ ಸೇವೆಗಳಿಗೆ ಇವುಗಳ ಬಳಕೆಯನ್ನು ಕೆಲ ಷರತ್ತುಗಳಿಗೆ ಅನ್ವಯವಾಗಿ ಮುಂದುವರಿಸಲು ಅವಕಾಶ ನೀಡಿತ್ತು.
ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿಯವರು, ಮೊದಲ ಸಂಪುಟ ಸಭೆಯಲ್ಲೇ ಕಪ್ಪುಹಣ ಮಟ್ಟಹಾಕಲು ವಿಶೇಷ ತನಿಖಾ ತಂಡ ರಚಿಸುವ ನಿರ್ಧಾರ ಕೈಗೊಂಡಿದ್ದರು" ಎಂದು ಸಮರ್ಥಿಸಿಕೊಂಡರು.
ಸರ್ಕಾರವು ಮರಿಷಿಯಸ್ ಮತ್ತು ಸೈಪ್ರಸ್ ಜತೆಗೆ ದ್ವಿಗುಣ ತೆರಿಗೆ ವಿಧಿಸುವಿಕೆ ಒಪ್ಪಂದವನ್ನು ಹೊಸದಾಗಿ ಮಾಡಿಕೊಂಡಿದ್ದು, ದಿವಾಳಿ ಸಂಹಿತೆಯನ್ನು ಜಾರಿಗೆ ತರಲಾಗಿದೆ. ಅಮೆರಿಕ ಜತೆಗೂ ಎಫ್‌ಎಟಿಸಿಎ ಅನ್ವಯ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.





