ಕ್ಯಾಸ್ಟ್ರೊ ಜಾಗತಿಕ ಕಮ್ಯುನಿಸ್ಟ್ ಆಂದೋಲನದ ನಾಯಕ: ಪಿಣರಾಯಿ

ತಿರುವನಂತಪುರಂ,ನ. 27: ಫಿಡೆಲ್ ಕ್ಯಾಸ್ಟ್ರೊ ಕ್ಯೂಬದ ಕಮ್ಯುನಿಸ್ಟ್ ಪಾರ್ಟಿಗೆ ಮಾತ್ರವಲ್ಲ ಜಾಗತಿಕ ಕಮ್ಯುನಿಸ್ಟ್ ಆಂದೋಲನದ ಧೀರ ನಾಯಕರಾಗಿದ್ದರು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಅವರು ಜಗತ್ತಿನಾದ್ಯಂತ ನಡೆಯುವ ಸಾಮ್ರಾಜ್ಯಶಾಹಿ ವಿರೋಧಿ ಪ್ರತಿರೋಧಕ್ಕೆ ಪ್ರಚೋದನೆಯಾಗಿದ್ದಾರೆ. ಅಮೆರಿಕನ್ ಸಾಮ್ರಾಜ್ಯಶಾಹಿಗೆ ಧೀರವಾಗಿ ಸವಾಲೊಡ್ಡಿ, ಸೋಶಲಿಸ್ಟ್ ವ್ಯವಸ್ಥೆಯನ್ನು ಬೆಳೆಸಿದ ಅಸಮಾನ್ಯ ವ್ಯಕ್ತಿಯಾಗಿದ್ದರು ಎಂದು ಪಿಣರಾಯಿ ಹೇಳಿದ್ದಾರೆ.
ಸೋಶಲಿಸ್ಟ್ ಆಡಳಿತ ಮಾದರಿಯಾಗಿ ಕ್ಯಾಸ್ಟ್ರೊ ಕಾಲದ ಕ್ಯೂಬವನ್ನು ಜಗತ್ತು ಸದಾ ಸ್ಮರಿಸಲಿದೆ. ಸಾವಿಲ್ಲದ ನೆನಪಾಗಿ ಉಳಿಯಲಿರುವ ಪಿಡೆಲ್‌ಕ್ಯಾಸ್ಟ್ರೊಗೆ ಅಶ್ರುತರ್ಪಣೆ ನಡೆಸುತ್ತಿದ್ದೇನೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.
ಕ್ಯೂಬನ್ ಕ್ರಾಂತಿ ನಾಯಕ ಕ್ಯಾಸ್ಟ್ರೊರ ಅಗಲಿಕೆ ಮನುಷ್ಯ ಸಮುದಾಯದ ದೊಡ್ಡ ನಷ್ಟವೆಂದು ಕೇರಳ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ವಿಎಸ್ ಅಚ್ಯುತಾನಂದನ್ ಹೇಳಿದ್ದಾರೆ.
ಅರ್ಧಶತಮಾನಗಳ ಕಾಲ ಜಗತ್ತಿನ ಕ್ರಾಂತಿ ಹೋರಾಟಗಳಿಗೆ ಶಕ್ತಿ ಪ್ರಕಾಶವಾಗಿದ್ದರು. ಅಮೆರಿಕನ್ ಸಾಮ್ರಾಜ್ಯದ ಮುಂದೆ ಅವರು ಒಮ್ಮೆಯೂ ಮಂಡಿಯೂರಿಲ್ಲ ಎಂದು ಅಚ್ಯುತಾನಂದನ್ ಹೇಳಿದ್ದಾರೆಂದು ವರದಿ ತಿಳಿಸಿದೆ.





