ಹಾಂಕಾಂಗ್ ಓಪನ್ ಫೈನಲ್‌ನಲ್ಲಿ ಎಡವಿದ ಸಿಂಧು

ಹಾಂಕಾಂಗ್, ನ.27: ಇಲ್ಲಿ ನಡೆದ ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಮಹಿಳೆಯರ ಸಿಂಗಲ್ಸ್‌ನ ಫೈನಲ್‌ನಲ್ಲಿ ಭಾರತದ ಆಟಗಾರ್ತಿ ಪಿ.ವಿ.ಸಿಂಧು ಸೋಲು ಅನುಭವಿಸಿದ್ದಾರೆ.
ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಸಿಂಧು ಅವರು ಇಂದು ನಡೆದ ಫೈನಲ್‌ನಲ್ಲಿ ಚೀನಾ ತೈಪೆಯ ನಾಲ್ಕನೆ ಶ್ರೇಯಾಂಕದ ತೈ ಜು ಯಿಂಗ್ ವಿರುದ್ಧ 15-21, 17-21 ಅಂತರದಲ್ಲಿ ಸೋಲು ಅನುಭವಿಸಿದರು.
41 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಸಿಂಧು ಅವರು ಸೋಲುವ ಮೂಲಕ ಚಾಂಪಿಯನ್ ಆಗಿ ಪ್ರಶಸ್ತಿ ಎತ್ತುವ ಅವಕಾಶ ಕಳೆದುಕೊಂಡರು.
ಸಿಂಧು ಮೂರನೆ ಸೂಪರ್ ಸಿರೀಸ್ ಫೈನಲ್‌ನಲ್ಲಿ ಸ್ಪರ್ಧಿಸಿದ್ದಾರೆ. 2015ರ ಡೆನ್ಮಾರ್ಕ್ ಓಪನ್‌ನಲ್ಲಿ ಸೋಲು ಅನುಭವಿಸಿದ್ದರು. ಆದರೆ ಒಂದು ವಾರದ ಹಿಂದೆ ನಡೆದ ಚೈನಾ ಓಪನ್ ಟೂರ್ಮಮೆಂಟ್‌ನ ಫೈನಲ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಸಿಂಧು ವಿರುದ್ಧ ಚೀನಾ ತೈಪೆಯ ನಾಲ್ಕನೆ ಶ್ರೇಯಾಂಕದ ತೈ ಜು ಯಿಂಗ್ ಗೆಲುವಿನ ದಾಖಲೆಯನ್ನು 5-3ಕ್ಕೆ ಏರಿಸಿದ್ದಾರೆ. ತೈ ಅವರು ಕಳೆದ ಜೂನ್‌ನಲ್ಲಿ ಇಂಡೋನೆಷ್ಯಾ ಓಪನ್ ಪ್ರಶಸ್ತಿ ಬಾಚಿಕೊಂಡಿದ್ದರು.
ಸಿಂಧು ಮತ್ತು ತೈ ಅವರ ನಡುವಿನ ಹಣಾಹಣಿ ಕುತೂಹಲ ಕೆರಳಿಸಿತ್ತು. ನಂ.9ಸಿಂಧು ಮೊದಲ ಸೆಟ್‌ನಲ್ಲೇ ಸೋಲು ಅನುಭವಿಸಿದರು. ಆದರೆ ಬಳಿಕ ಚೇತರಿಸಿಕೊಳ್ಳಲಿಲ್ಲ.
ಸಿಂಧು ಅವರು ಸ್ಥಳೀಯ ಆಟಗಾರ್ತಿ ಚೆವಾಂಗ್ ನಗಾನ್ ಅವರನ್ನು ಮಣಿಸಿ ಫೈನಲ್ ತಲುಪಿದ್ದರು. ಇದೇ ವೇಳೆ ತೈ ಅವರು ರಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಪಡೆದ ಕರೋಲಿನಾ ಮರಿನ್ ಅವರನ್ನು ಮಣಿಸಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು.








