ಜಿಲ್ಲೆಯಲ್ಲಿ ಮಕ್ಕಳ ಅಪಹರಣ ಜಾಲವಿಲ್ಲ: ಡಿಸಿಪಿ
ಎಸ್ಸಿ-ಎಸ್ಟಿ ಮಾಸಿಕ ಸಭೆ
ಮಂಗಳೂರು, ನ.27: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಅಪಹರಣದ ಯಾವುದೇ ಜಾಲವಿಲ್ಲ. ಈ ಬಗ್ಗೆ ಹರಡಿದ ಸುಳ್ಳು ವದಂತಿಗಳ ಬಗ್ಗೆ ಕಿವಿಕೊಡಬೇಡಿ ಎಂದು ಡಿಸಿಪಿ ಡಾ.ಸಂಜೀವ ಎಂ.ಪಾಟೀಲ ಹೇಳಿದರು.
ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ರವಿವಾರ ನಡೆದ ಎಸ್ಸಿ-ಎಸ್ಟಿ ಸಭೆಯಲ್ಲಿ ದಲಿತ ಮುಖಂಡ ಅನಿಲ್ ಕುಮಾರ್ ಮಾತನಾಡಿ, ಮಕ್ಕಳನ್ನು ಅಪಹರಣ ಮಾಡುವ ಜಾಲದ ವದಂತಿಯಿಂದ ಹೆತ್ತವರು ಆತಂಕಗೊಂಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯಪಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಸಿಪಿ ಸಂಜೀವ್ ಪಾಟೀಲ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸಂದೇಶಗಳು ರವಾನೆಯಾಗುತ್ತಿದೆ. ಈ ಬಗ್ಗೆ ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಇಂತಹ ಆಧಾರ ರಹಿತ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಒಂದು ವೇಳೆ ಸಂಶಯಾಸ್ಪದವಾಗಿ ಕಾಣುವ ವ್ಯಕ್ತಿ, ವಾಹನ ಹಾಗೂ ವಸ್ತುಗಳ ಬಗ್ಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಗರದ ಕೆಲವು ರಿಕ್ಷಾ ಚಾಲಕರು ಪ್ರಯಾಣಿಕರು ಸೂಚಿಸಿದ ಪ್ರದೇಶಗಳಿಗೆ ಕೇಳುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದಲಿತ ಮುಖಂಡ ಎಸ್.ಪಿ. ಆನಂದ್ ಒತ್ತಾಯಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಪಿ ಸಂಜೀವ ಪಾಟೀಲ, ಪ್ರಯಾಣಿಕರು ಸೂಚಿಸಿದ್ದ ಸ್ಥಳಕ್ಕೆ ಬರಲು ಒಪ್ಪದ ಚಾಲಕರ ಹಾಗೂ ರಿಕ್ಷಾದ ಬಗ್ಗೆ 100ಕ್ಕೆ ಕರೆ ಮಾಡಿ ಮಾಹಿತಿ ನೀಡಿ. ಈ ಬಗ್ಗೆ ಕ್ರಮಕೈಗೊಂಡು ದಂಡ ವಸೂಲಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಾಲಾ ಕಾಲೇಜಿನಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯವಾಗಿದ್ದರೂ, ಜಿಲ್ಲೆಯ ಕೆಲವು ಶಾಲಾ-ಕಾಲೇಜುಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡದಿರುವುದು ಕಾನೂನು ಬಾಹಿರ. ಈ ಬಗ್ಗೆ ಪೊಲೀಸ್ ಇಲಾಖೆ ಹೆಚ್ಚಿನ ಮುತ್ತುವರ್ಜಿ ವಹಿಸಿ ಎಲ್ಲ ಕಡೆಗಳಲ್ಲಿ ಅಳವಡಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡರು ಮನವಿ ಮಾಡಿದರು.
ಈ ಬಗ್ಗೆ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ಕೆ.ಎಂ.ಶಾಂತರಾಜು ಭರವಸೆ ನೀಡಿದರು.







