ಅನಾಥಾಶ್ರಮ ಮಕ್ಕಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ

ಮಂಗಳೂರು ನ.27: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಇದರ ಜಂಟಿ ಆಶ್ರಯದಲ್ಲಿ ರೋಟರಿ 18ನೆ ವಾರ್ಷಿಕ ಅನಾಥಾಶ್ರಮ ಮಕ್ಕಳ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ ಹಾಗೂ ಉತ್ಸವವು ನಗರದ ಶಾರದಾ ಪ್ರೌಢಶಾಲೆಯ ಆವರಣದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಿಟ್ಟೆ ವಿವಿ ಕುಲಪತಿ ಡಾ.ವಿನಯ್ ಹೆಗ್ಡೆ ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತ ಮಕ್ಕಳ ಉತ್ಸಾಹಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡುವ ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವಾ ಮನೋಭಾವ ಶ್ಲಾಘನೀಯ ಎಂದರು.
ಶಾರದಾ ವಿದ್ಯಾಸಂಸ್ಥೆಯ ಅಧ್ಯಕ್ಷ ಎಂ.ಬಿ.ಪುರಾಣಿಕ್, ಸಂಘಟನಾ ಅಧ್ಯಕ್ಷ ಡಾ. ದೇವದಾಸ್ ರೈ ಮಾತನಾಡಿದರು.
ರೋಟರಿ ವಲಯ 2 ಸಹಾಯಕ ಗವರ್ನರ್ ನಾಯಕ್ ಪ್ರಭು, ಸಂಸ್ಥೆಯ ಸ್ಥಾಪಕಾಧ್ಯಕ್ಷ ಪ್ರೇಮನಾಥ್ ಕುಡ್ವ, ರೋಟರ್ಯಾಕ್ಟ್ ಸಂಸ್ಥೆಯ ಅಧ್ಯಕ್ಷ ಯತೀಶ್ ಸಾಲ್ಯಾನ್, ಕಾರ್ಯದರ್ಶಿ ಶಿವಪ್ರಸಾದ್ ಭಟ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಅನಿಲ್ ಗೊನ್ಸಲ್‌ವೀಸ್ ಸ್ವಾಗತಿಸಿದರು. ಕಾರ್ಯದರ್ಶಿ ರೇಮಂಡ್ ಡಿಕುನ್ಹ ವಂದಿಸಿದರು. ಕೆ.ಎಂ.ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.
ನಗರದ 10 ಅನಾಥಾಶ್ರಮದ ಸುಮಾರು 500 ಮಕ್ಕಳು ಈ ಉತ್ಸವದಲ್ಲಿ ಸಂಭ್ರಮಿಸಿದರು. ಪೋಷಕರ ಪ್ರೀತಿ ವಾತ್ಸಲ್ಯದಿಂದ ವಂಚಿತರಾದ ಈ ಈ ಮಕ್ಕಳು ಪರಸ್ಪರ ಬೆರೆತು ಉತ್ಸಾಹದಿಂದ ನಕ್ಕು ನಲಿದಾಡಿದರು. ಸ್ನೇಹ ಮತ್ತು ಒಡನಾಟವನ್ನು ಸ್ಮರಿಸಿ ತಮ್ಮ ವೈಯುಕ್ತಿಕ ಅನುಭವಗಳನ್ನು ಹಂಚಿಕೊಂಡರು. ಆಕರ್ಷಣೀಯ ಪಥ ಸಂಚಲನದ ಬಳಿಕ ತಮ್ಮಲ್ಲಿ ಹುದುಗಿದ ಕ್ರೀಡಾ ಸಾಮರ್ಥ್ಯ ಮತ್ತು ಕಲಾಪ್ರತಿಭೆಯನ್ನು ಪ್ರದರ್ಶಿಸಿ ಸಭಿಕರನ್ನು ರಂಜಿಸಿದರು.







