ಜಾತಿ ಸಮೀಕ್ಷೆ ಆಧಾರದಲ್ಲಿ ಸಮಾಜದ ಅಭಿವೃದ್ಧಿಗೆ ಕ್ರಮ: ದಿನೇಶ್ ಗುಂಡೂರಾವ್

ಉಡುಪಿ, ನ.27: ಜಾತಿಗಳ ಆರ್ಥಿಕ ಸ್ಥಿಗತಿಗಳ ಕುರಿತು ನಡೆಸಿರುವ ಸಮೀಕ್ಷೆಯ ವರದಿಯು ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ಮಂಡನೆ ಯಾಗಲಿದ್ದು, ಇದರಿಂದ ಪ್ರತಿಯೊಂದು ಜಾತಿಗಳ ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಯ ಮಟ್ಟ ಹೊರಬರಲಿದೆ. ಆ ಸಮೀಕ್ಷೆಯ ಆಧಾರದಲ್ಲಿ ಎಲ್ಲಾ ಸಮಾಜದ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಕಾರ್ಯಾ ಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ರವಿವಾರ ನಡೆದ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಬ್ರಾಹ್ಮಣ ಸಮಾಜ ಸಂಸ್ಕೃತಿ, ವೌಲ್ಯಗಳನ್ನು ಉಳಿಸಿಕೊಳ್ಳುವುದರೊಂದಿಗೆ ಪ್ರಸ್ತುತ ಸವಾಲುಗಳನ್ನು ಎದುರಿಸಿಕೊಂಡು ಮುನ್ನಡೆಯುವುದು ಬಹಳ ಮುಖ್ಯ. ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಎಲ್ಲರೂ ತಮ್ಮ ಹಕ್ಕನ್ನು ಸ್ಥಾಪನೆ ಮಾಡಬೇಕಾದರೆ ಮೊದಲು ಸಂಘಟಿತರಾಗಬೇಕು. ಬ್ರಾಹ್ಮಣ ಸಮಾಜ ಎಲ್ಲ ಸಮಾಜದ ಬಗ್ಗೆ ಚಿಂತನೆ ಮಾಡುವ ಸಮಾಜ. ಅದೇ ರೀತಿ ನಮ್ಮ ಸಮಾಜದ ಜನರಿಗೆ ಸಹಾಯ, ರಕ್ಷಣೆ ಒದಗಿಸುವ ಕೆಲಸವನ್ನೂ ಕೂಡ ನಾವು ಮಾಡಬೇಕಾಗಿದೆ ಎಂದರು.
ಬ್ರಾಹ್ಮಣ ಸಮಾಜದಲ್ಲಿಯೂ ಸಾಕಷ್ಟು ಜನರು ಕಷ್ಟದಲ್ಲಿದ್ದಾರೆ ಹಾಗೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸರಕಾರದ ಮೇಲೆ ಬ್ರಾಹ್ಮಣ ಸಮಾಜ ಬಹಳ ನಿರೀಕ್ಷೆಯನ್ನು ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ನಾನು ಮುಖ್ಯಮಂತ್ರಿ ಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದು ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಮಹಾಸಭಾವನ್ನು ಉದ್ಘಾಟಿಸಿದ ಪರ್ಯಾಯ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಬ್ರಾಹ್ಮಣ ಸಮಾಜವು ಸಮಸ್ತ ಹಿಂದೂ ಸಮಾಜದ ಕಲ್ಯಾಣದ ಬಗ್ಗೆ ಚಿಂತಿಸಬೇಕು. ಹಿಂದೂ ಧರ್ಮದ ರಕ್ಷಣೆ ಮತ್ತು ಹಿಂದೂ ಸಮಾಜದ ಕಲ್ಯಾಣ ಬ್ರಾಹ್ಮಣರ ಮುಖ್ಯ ಕರ್ತವ್ಯ ವಾಗಬೇಕು. ಬ್ರಾಹ್ಮಣ ಸಮಾಜದಲ್ಲಿರುವ ಆಂತರಿಕ ಭೇದಭಾವವನ್ನು ಮರೆತು, ಸನಾತನ ಧರ್ಮವನ್ನು ಉಳಿಸಲು ಕಾರ್ಯೋನ್ಮುಖರಾಗಬೇಕು ಎಂದರು.
ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಸಮಾಜದ ನಡುವೆ ಯಾವುದೇ ದ್ವೇಷದ ಭಾವನೆ ಇಲ್ಲ. ಕೆಲವೊಂದು ಬುದ್ಧಿಜೀವಿಗಳು ದ್ವೇಷದ ಭಾವನೆ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಆದರೂ ಬ್ರಾಹ್ಮಣೇತರ ಸಮುದಾಯದವರು ಬ್ರಾಹ್ಮಣರ ಮೇಲೆ ಅಪಾರ ಅಭಿಮಾನವನ್ನು ತೋರಿಸುತ್ತಿದ್ದಾರೆ. ಯಾವುದೇ ರೀತಿಯ ಘರ್ಷಣೆ, ಕೋಮುಗಲಭೆಯಲ್ಲಿ ಬ್ರಾಹ್ಮಣರ ಪಾತ್ರವಿಲ್ಲ. ಹಾಗಿದ್ದರೂ ಕೆಲವರು ದಲಿತರು ಮತ್ತು ಬ್ರಾಹ್ಮಣರ ನಡುವೆ ಬೇಧಭಾವ ಬೆಳೆಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಂ. ಮಂಜುನಾಥ ಉಪಾಧ್ಯ ವಹಿಸಿದ್ದರು. ಪೇಜಾವರ ಕಿರಿಯ ಯತಿ ಶ್ರೀವಿಶ್ವ ಪ್ರಸನ್ನ ಸ್ವಾಮೀಜಿ, ಶಿವಮೊಗ್ಗ ಶಾಸಕ ಪ್ರಸನ್ನ ಕುಮಾರ, ಮಾಜಿ ಶಾಸಕ ಕೆ.ರಘುಪತಿ ಭಟ್, ವೈದ್ಯ ಡಾ.ಅಶೋಕ್ ಕುಮಾರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೆಂಕಟ ನಾರಾಯಣ, ಹರಿಕೃಷ್ಣ ಪುನರೂರು ಮೊದಲಾದವರು ಉಪಸ್ಥಿತರಿದ್ದರು.







