ಸೈನಿಕರ ಹೆಸರಲ್ಲಿ 'ದಾಳಿ ಮಾಡುವವರಿಗೆ' ಸರಿಯಾಗಿ ತಿರುಗೇಟು ನೀಡಿದ ನಿವೃತ್ತ ಯೋಧ

ಲುಧಿಯಾನ, ನ. 27 : ಈಗ ದೇಶಾದ್ಯಂತ ಜನರು ಯಾವುದೇ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲಿದರೆ ಕೆಲವರು ಪಟ್ಟಂತ ಒಂದು ರೆಡಿಮೇಡ್ ಪ್ರತಿಕ್ರಿಯೆ ನೀಡಿ ಸಮಸ್ಯೆ ತೋರಿಸಿದವರ ಬಾಯಿ ಮುಚ್ಚಿಸುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಆ ರೆಡಿಮೇಡ್ ಉತ್ತರವನ್ನು ನೀವೂ ಬಹಳಷ್ಟು ಬಾರಿ ಕೇಳಿರಬಹುದು.
" ನಮ್ಮ ಸೈನಿಕರು ಗಡಿಯಲ್ಲಿ ಎಂತೆಂತಹ ಕಷ್ಟ, ಸಂಕಟ ಸಹಿಸಿಕೊಂಡು ದೇಶ ಕಾಯುತ್ತಾರೆ. ನೀವು ಇಲ್ಲಿ ಆರಾಮವಾಗಿ ತಿಂದುಂಡುಕೊಂಡು ಇರುವವರು ಇಂತಹ ಸಣ್ಣಪುಟ್ಟ ತೊಂದರೆಗಳಿಗೆ ಇಷ್ಟು ರಾದ್ಧಾಂತ ಮಾಡುವುದು ಸರಿಯೇ ?" ಎಂಬುದೇ ಆ ಉತ್ತರ.
ವಿಶೇಷವಾಗಿ ಕೇಂದ್ರ ಸರಕಾರದ ವಿರುದ್ಧ ಯಾವುದೇ ಟೀಕೆ ಮಾಡಿದರೂ ಅದರ ಪರವಾಗಿರುವವರು ಮಾತು ಆರಂಭಿಸುವುದೇ ಈ ಮೇಲಿನ 'ಬೆದರಿಕೆ' ಜೊತೆ. ಇತ್ತೀಚೆಗೆ 500, 1000 ರೂ. ರದ್ದಾದ ಬಳಿಕ ದೇಶಾದ್ಯಂತ ಜನಸಾಮಾನ್ಯರು ತೀವ್ರ ತೊಂದರೆ ಎದುರಿಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಕಾರ್ಮಿಕರು, ರೈತರು, ಕೆಳ ಮಧ್ಯಮ ವರ್ಗದ ಜನರು ದಿನನಿತ್ಯದ ಖರ್ಚು ವೆಚ್ಚಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಈ ತೊಂದರೆಗಳ ಬಗ್ಗೆ ಧ್ವನಿ ಎತ್ತಿದರೆ ಮತ್ತದೇ ಸೈನಿಕರ ಹೆಸರಲ್ಲಿ 'ದಾಳಿ' ಪ್ರಾರಂಭವಾಗುತ್ತದೆ.
ಆದರೆ ಇತ್ತೀಚೆಗೆ ಲುಧಿಯಾನದಲ್ಲಿರುವ ನಿವೃತ್ತ ಯೋಧ ಲೆ. ಕ. ದರ್ಶನ್ ಧಿಲ್ಲೋನ್ ಅವರ ಬಳಿ ಇದೇ 'ದಾಳಿ' ಮಾಡಲು ಹೋದ 'ವಿಶೇಷ ದೇಶಭಕ್ತ' ನೊಬ್ಬನಿಗೆ ಧಿಲ್ಲೋನ್ ಸರಿಯಾಗಿಯೇ ಬೆವರಿಳಿಸಿದ್ದಾರೆ. ಎಟಿಎಂ ಒಂದರ ಎದುರು ಸರತಿ ಸಾಲಿನಲ್ಲಿ ನಿಂತು ಬಳಲಿದ ಧಿಲ್ಲೋನ್ ಅಲ್ಲಿನ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ಹಿಂದೆ ಇದ್ದವನೊಬ್ಬ ಸೈನಿಕರ ಹೆಸರಲ್ಲಿ 'ದಾಳಿ' ಪ್ರಾರಂಭಿಸಿದ. ಧಿಲ್ಲೋನ್ ಸ್ವತಃ ಯೋಧ ಎಂದು ಆತನಿಗೆ ಗೊತ್ತಿರಲಿಲ್ಲ.
"ನಾನು ಅದೇ ದೇಶಸೇವೆ ಎರಡು ದಶಕಗಳ ಕಾಲ ಮಾಡಿ ಈಗ ಪಿಂಚಣಿ ಪಡೆಯಲು ಇಲ್ಲಿ ಸಾಲಲ್ಲಿ ನಿಂತಿದ್ದೇನೆ. ಇಲ್ಲಿ ಎಟಿಎಂ ಸಾಲಲ್ಲಿ ನಿಂತವರಿಗೆ ದೇಶಭಕ್ತಿಯ ಸರ್ಟಿಫಿಕೇಟ್ ನೀಡುವ ಬದಲು ನೀವು ಮೋದೀಜಿ ಅವರಲ್ಲಿ ಮಾತನಾಡಿ ನಮಗೆ ನ್ಯಾಯವಾಗಿ ಸಿಗಬೇಕಾದ ಪಿಂಚಣಿ (ಒಆರ್ ಒಪಿ) ಕೊಡಿಸಿ " ಎಂದು ಧಿಲ್ಲೋನ್ ಆತನಿಗೆ ಸರಿಯಾಗಿ ಪ್ರತ್ಯುತ್ತರ ನೀಡಿದ್ದಾರೆ. ಅಲ್ಲಿಗೆ ಆತನ ಧ್ವನಿ ಅಡಗಿದೆ.







