ಕುವೆಂಪು ಸಾರಿದ ವಿಶ್ವ ಮಾನವ ಪ್ರಜ್ಞೆಯನ್ನು ಸಂಘಟನೆಗಳು ಎತ್ತಿಹಿಡಿಯಬೇಕಾಗಿದೆ: ಡಾ.ನರೇಂದ್ರ ರೈ ದೇರ್ಲ

ಮಂಗಳೂರು, ನ.27:ರಾಷ್ಟ್ರಕವಿ ಕುವೆಂಪುರವರು ನಮಗೆ ತೋರಿದ ವಿಶ್ವ ಮಾನವ ಪ್ರಜ್ಞೆಯನ್ನು ಎಲ್ಲಾ ಸಂಘಟನೆಗಳು ಎತ್ತಿಹಿಡಿಯಬೇಕಾಗಿದೆ ಎಂದು ಬೆಳ್ಳಾರೆಯ ಡಾ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ನರೇಂದ್ರ ರೈ ದೇರ್ಲ ತಿಳಿಸಿದ್ದಾರೆ.
ಕನ್ನಡ ನಾಡು ನುಡಿ ಸೇವೆಯ ಅಂಗವಾಗಿ ಕದ್ರಿ ಹಿಲ್ಸ್ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ವತಿಯಿಂದ ನಗರದ ಪುರಭವನದಲ್ಲಿ ಇಂದು ಹಮ್ಮಿಕೊಂಡ ಲಯನ್ಸ್ ನುಡಿ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ದೇಶ, ಗಡಿಗಳ ಎಲ್ಲೆಯನ್ನು ಮೀರಿದ ಕುವೆಂಪುರವರ ಅನಿಕೇತನದ ಕಲ್ಪನೆಯನ್ನು ನಾವು ಮೈಗೂಡಿಸಿಕೊಳ್ಳಬೇಕು. ಹಣ ಮನುಷ್ಯರ ನಡುವಿನ ಸಂಬಂಧಗಳನ್ನು ಹಾಳುಗೆಡಹುತ್ತಿರುವ ಈ ಸಂದರ್ಭದಲ್ಲಿ ಜನರನ್ನು ಒಂದುಗೂಡಿಸುವ ಚಿಂತನೆ, ಶಿಕ್ಷಣ,ಸಂಸ್ಕೃತಿಗಳನ್ನು ಸಂರಕ್ಷಿಸಬೇಕಾಗಿದೆ. ಎಲ್ಲವನ್ನು ವಿಜ್ಞಾನ, ಲೆಕ್ಕದ ತರ್ಕದ ಆಧಾರದಲ್ಲಿ ನೋಡಬಾರದು. ನಮ್ಮ ಬದುಕು ಇತರರಿಗೆ ಸಹಾಯ ಮಾಡುವ ದಾರಿದೀಪದಂತೆ ಬೆಳಕು ನೀಡಬೇಕಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜನರ ಬುದ್ಧಿವಂತಿಕೆ ಜಾತಿ, ಮತ, ಧರ್ಮದ ಭೇದವಿಲ್ಲದೆ ಜನರನ್ನು ಒಂದುಗೂಡಿಸುವಂತಾಗಲಿ ಎಂದು ನರೇಂದ್ರ ರೈ ದೇರ್ಲ ಹಾರೈಸಿದರು.
ನಮ್ಮ ದೇಶದ ಗಡಿಯಲ್ಲಿ ಸರ್ಜಿಕಲ್ ದಾಳಿ ನಡೆದಾಗ ದೇಶದಲ್ಲಿ ಯುದ್ಧದ ಬಗ್ಗೆ ಟಿ.ವಿ ಮಾಧ್ಯಮಗಳಲ್ಲಿ ಚರ್ಚೆ ಆರಂಭವಾಗತೊಡಗಿತು. ನಮ್ಮ ದೇಶ ಹಾಗೂ ನೆರೆಯ ಪಾಕಿಸ್ತಾನ ದೇಶದಲ್ಲಿ ಯಾವ ಯಾವ ಶಸ್ತ್ರಾಸ್ತ್ರಗಳು ಎಷ್ಟೆಷ್ಟು ಇವೆ ಎಂಬ ಬಗ್ಗೆ ಚರ್ಚೆ ನಡೆಯತೊಡಗಿತು. ಆದರೆ ನಮ್ಮ ಜನ ಜೀವನಕ್ಕೆ ಆಧಾರವಾದ ನೀರಿನ ಸಂಗ್ರಹ ಎಷ್ಟಿದೆ, ಆಮ್ಲಜನಕ ಎಷ್ಟಿದೆ ಎನ್ನುವ ವಿಷಯಗಳ ಬಗ್ಗೆ ಚರ್ಚೆಗಳು ನಡೆಯಬೇಕಾಗಿರುವುದು ಯುದ್ಧಕ್ಕಾಗಿ ಸಿದ್ಧಮಾಡಿರುವ ಸಾಮಗ್ರಿಗಳಿಂತ ಮುಖ್ಯವಿಷಯ. ಜಗತ್ತು ಕ್ಷೇಮವಾಗಿ ಉಳಿದರೆ ಮಂಗಳೂರು ಕ್ಷೇಮವಾಗಿ ಉಳಿಯಲು ಸಾಧ್ಯ ಎಂದು ನರೇಂದ್ರ ರೈ ತಿಳಿಸಿದರು.
ಕೃಷಿ ಈ ಜಗತ್ತಿನ ಮೊತ್ತ ಮೊದಲ ಸಂಸ್ಕೃತಿ. ಆದರೆ ಈ ಕೃಷಿ ಕ್ಷೇತ್ರಕ್ಕೆ ದೇಶದಲ್ಲಿ ಸಿಗಬೇಕಾದ ಸೂಕ್ತ ಮಾನ್ಯತೆ ದೊರೆಯುತ್ತಿಲ್ಲ. ದೇಶದಲ್ಲಿ ರಾಜಕಾರಣಿಗಳ ಪ್ರತಿಮೆಗಳು ಕಾಣಸಿಗುತ್ತದೆ. ಆದರೆ ದೇಶದಲ್ಲಿ ಎಲ್ಲಿಯೂ ರೈತನೊಬ್ಬನ ಪ್ರತಿಮೆ ನಮಗೆ ಕಾಣಸಿಗುವುದಿಲ್ಲ ಎಂದು ನರೇಂದ್ರ ರೈ ದೇರ್ಲ ತಿಳಿಸಿದರು.
ಸಮಾರಂಭದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಕರ್ಣಾಟಕ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ‘ನುಡಿ ತೇರು’ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ನುಡಿ ಸಂಭ್ರಮ ಚಾಲನಾ ಸಮಿತಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಂಚಾಲಕ ಎನ್.ಟಿ.ರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲಯನ್ಸ್ ಗವರ್ನರ್ ಅರುಣ್ ಶೆಟ್ಟಿ, ಡಿ.ಎಂ.ರವಿಕುಮಾರ್, ಕೇಶವ ಪ್ರಭು, ಶ್ರೀಧರ ಬಿ.ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಲಕ ಪ್ರಶಸ್ತಿ ಪುರಸ್ಕೃತ ಯೋಗೀಶ್ ಶರ್ಮರನ್ನು ಹಾಗೂ ಕಲಾವಿದೆ ಶಬರಿ ವೈ. ಗಾಣಿಗರನ್ನು ಅಭಿನಂದಿಸಲಾಯಿತು.







