ಕೊಣಾಜೆ: ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳ ಹೊರಸಂಚಾರ

ಕೊಣಾಜೆ, ನ.27: ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಉಳ್ಳಾಲ ಸ್ಥಳೀಯ ಸಂಸ್ಥೆಯ ವತಿಯಿಂದ ಕೊಣಾಜೆ ಪದವಿನಿಂದ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳಿಗೆ ಹೊರಸಂಚಾರ ಕಾರ್ಯಕ್ರಮ ಶನಿವಾರ ನಡೆಯಿತು.
ಕೊಣಾಜೆ ಪದವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಹೊರಟ ಹೊರಸಂಚಾರ ಕಾರ್ಯಕ್ರಮವನ್ನು ಮಂಗಳಾ ಗ್ರಾಮೀಣ ಟ್ರಸ್ಟ್‌ನ ನಾಸೀರ್ ಕೆ.ಕೆ. ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಗ್ರಾಮೀಣ ಜೀವನ, ಗ್ರಾಮೀಣ ಸಂಸ್ಕೃತಿಯನ್ನು ಅರಿಯಲು ಸಹಕಾರಿಯಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ಪಠ್ಯ ಚಟುವಟಿಕೆಯ ಜೊತೆಗೆ ಇಂತಹ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವನ್ನು ಕಟ್ಟಿಕೊಡುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪಂಚಾಯತ್ ಸದಸ್ಯ ಅಚ್ಯುತಗಟಿ, ಮಕ್ಕಳಲ್ಲಿ ಶಿಸ್ತನ್ನು ಬೆಳೆಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸಹಕಾರಿಯಾಗಿದ್ದು, ಹೊರಸಂಚಾರದಂತಹ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಶಿಷ್ಟವಾದ ಅನುಭವವನ್ನು ನೀಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೊಣಾಜೆ ಪದವು ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೆಸ್ಸಿ ಕುವೆಲ್ಲೋ, ಸೌಟ್ಸ್ ಗೈಡ್ಸ್ ಶಿಕ್ಷಕರಾದ ಜಗದೀಶ್ ಶೆಟ್ಟಿ, ಅಬ್ದುಲ್ ಮಜೀದ್, ರಾಜೀವ ನಾಯ್ಕ, ಪ್ರತೀಪ್, ನಾಗೇಂದ್ರ ನಾಯರ್, ಪುರುಷೋತ್ತಮ, ಪುಷ್ಪರಾಜ್, ನಯನಾ, ಭಾರತಿ, ಜೋಸ್ಟಿನ್ ಡಿಸೋಜ, ಗೀತಾ ಸುಗಂಧಿ, ಸುಶೀಲಬಾಯಿ ಮುಂತಾದವರು ಉಪಸ್ಥಿತರಿದ್ದರು.
ಹೊರಸಂಚಾರ ಕಾರ್ಯಕ್ರಮದಲ್ಲಿ ಸ್ಥಳೀಯ ಸಂಸ್ಥೆಯ ಸುಮಾರು 16 ಶಾಲೆಯ 200 ರಷ್ಟು ವಿದ್ಯಾರ್ಥಿಗಳು ಭಾಗವಹಿಸಿದ್ದರು.







