ಲಕ್ಷ್ಮಣರೇಖೆ ಕುರಿತು ಮೂರ್ಖ ಹೇಳಿಕೆಗಾಗಿ ‘ಮುಟ್ಠಾಳ’ ರೋಹಟ್ಗಿ ವಜಾಕ್ಕೆ ಸ್ವಾಮಿ ಆಗ್ರಹ

ಹೊಸದಿಲ್ಲಿ,ನ.27: ಲಕ್ಷ್ಮಣರೇಖೆ ಎನ್ನುವುದೊಂದಿದೆ ಮತ್ತು ಅದನ್ನು ದಾಟುವಂತಿಲ್ಲ ಎನ್ನುವುದು ನ್ಯಾಯಾಂಗ ಸೇರಿದಂತೆ ಪ್ರತಿಯೊಬ್ಬರಿಗೂ ಗೊತ್ತಿರಬೇಕು ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿಯವರ ಹೇಳಿಕೆಯ ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿಯವರು, ಈ ಅರ್ಥಹೀನ ಹೇಳಿಕೆಗಾಗಿ ಅವರನ್ನು ತಕ್ಷಣ ಹುದ್ದೆಯಿಂದ ವಜಾಗೊಳಿಸಬೇಕು ಎಂದು ರವಿವಾರ ಆಗ್ರಹಿಸಿದ್ದಾರೆ.
‘‘ಲಕ್ಷ್ಮಣರೇಖೆ ಕುರಿತು ಅರ್ಥಹೀನ ಹೇಳಿಕೆಯನ್ನು ನೀಡಿರುವುದಕ್ಕಾಗಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರನ್ನು ಕಿತ್ತೆಸೆಯಿರಿ. ನ್ಯಾಯಾಲಯದ ವ್ಯವಹಾರ ಗಳಲ್ಲಿ ಅವರು ಮುಟ್ಠಾಳರಷ್ಟೇ ಅಲ್ಲ, ಸೀತೆ ಲಕ್ಷ್ಮಣರೇಖೆಯನ್ನು ದಾಟಿದ್ದು ಏಕೆ ಎನ್ನುವುದೂ ಅವರಿಗೆ ಗೊತ್ತಿಲ್ಲ ’’ ಎಂದು ಸ್ವಾಮಿ ಟ್ವೀಟಿಸಿದ್ದಾರೆ.
ಶನಿವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ಟಿ.ಎಸ್.ಠಾಕೂರ್ ಅವರು ದೇಶದ ಉಚ್ಚ ನ್ಯಾಯಾಲಯಗಳಲ್ಲಿ 500 ನ್ಯಾಯಾಧೀಶರ ಹುದ್ದೆಗಳು ಖಾಲಿಯಿದ್ದು, ಅವುಗಳನ್ನು ಭರ್ತಿ ಮಾಡುವಲ್ಲಿ ಕೇಂದ್ರವು ಉದಾಸೀನತೆಯನ್ನು ಪ್ರದರ್ಶಿಸುತ್ತಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರೋಹಟ್ಗಿ ಲಕ್ಷ್ಮಣರೇಖೆಯ ಹೇಳಿಕೆ ನೀಡಿದ್ದರು.





