ಪಡುಬಿದ್ರೆಯಲ್ಲಿ ಮಕ್ಕಳ ಹಬ್ಬ ಉದ್ಘಾಟನೆ

ಪಡುಬಿದ್ರೆ, ನ.27: ಜನ್ಮಕೊಟ್ಟ ತಾಯಿ ಮತ್ತು ಜನ್ಮಭೂಮಿಗೆಳೆರಡೂ ಸ್ವರ್ಗಕ್ಕಿಂತಲೂ ಮಿಗಿಲಾದುದು. ಇವರೆಡನ್ನೂ ನಿರ್ಮಲ ಮನಸ್ಸಿನಿಂದ ಪ್ರೀತಿಸಿದರೆ ಎಲ್ಲರೂ ಸುಸಂಸ್ಕೃತರಾಗುತ್ತೇವೆ ಎಂದು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಪದ್ಮನಾಭ ಮರೋಳಿ ಹೇಳಿದರು.
ಯುವವಾಹಿನಿ ಪಡುಬಿದ್ರೆ ಘಟಕದ ಆಶ್ರಯದಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ರವಿವಾರ ಆಯೋಜಿಸಲಾಗಿದ್ದ ಶಾಲಾ ಮಕ್ಕಳಿಗಾಗಿ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಮಕ್ಕಳ ಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಾಲಾ ವಿದ್ಯಾರ್ಥಿ ನಾಯಕಿ ಭಾಗ್ಯಶ್ರೀ ಮಾತನಾಡಿ, ಶಾಲಾ ವಿದ್ಯಾರ್ಥಿಗಳಲ್ಲಿ ಪ್ರತಿಭೆಯಿದೆ. ಆದರೆ ಸೂಕ್ತ ಅವಕಾಶ ದೊರಕುವುದು ಅತೀ ವಿರಳ. ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಶಿಕ್ಷಕ ಸೋಮನಾಥ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಪಡುಬಿದ್ರೆ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಸರಸ್ವತಿ, ಯುವವಾಹಿನಿ ಪಡುಬಿದ್ರೆ ಘಟಕಾಧ್ಯಕ್ಷ ವೀರೇಂದ್ರ ಎನ್., ಸಂಚಾಲಕ ದೀಪಕ್ ಕೆ. ಬೀರ ಮತ್ತಿತರರು ಉಪಸ್ಥಿತರಿದ್ದರು.







