ನಗದುರಹಿತ ಸಮಾಜವಾಗುವಂತೆ ದೇಶಕ್ಕೆ ಪ್ರಧಾನಿ ಮೋದಿ ಆಗ್ರಹ

ಹೊಸದಿಲ್ಲಿ,ನ.27: ನೋಟು ನಿಷೇಧದ ಬಳಿಕ ತನ್ನ ಮೊದಲ ರೇಡಿಯೊ ಭಾಷಣ ‘ಮನ್ ಕಿ ಬಾತ್’ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು, ಭಾರತವನ್ನು ನಗದುರಹಿತ ಸಮಾಜವನ್ನಾಗಿಸುವ ನಿಟ್ಟಿನಲ್ಲಿ ಆಂದೋಲನವೊಂದಕ್ಕೆ ಆಗ್ರಹಿಸಿದರು. ಕನಿಷ್ಠ 10 ಕುಟುಂಬಗಳಿಗೆ ಮೊಬೈಲ್ ಬ್ಯಾಂಕಿಂಗ್ ಮತ್ತು ಇತರ ಇ-ಕಾಮರ್ಸ್ ತಂತ್ರಜ್ಞಾನವನ್ನು ಕಲಿಸುವಂತೆ ಯುವಪೀಳಿಗೆಗೆ ಅವರು ಕರೆ ನೀಡಿದರು.
ನೋಟು ನಿಷೇಧದ ನಿರ್ಧಾರ ಕಠಿಣವಾಗಿತ್ತು ಎಂದು ಬಣ್ಣಿಸಿದ ಅವರು, ಈ ನಿರ್ಧಾರಕ್ಕೆ ಸಂಬಂಧಿಸಿದಂತೆ ಎದುರಾಗುವ ಕಷ್ಟಗಳ ಬಗ್ಗೆ ತನಗೆ ಅರಿವಿತ್ತು. ನಿರ್ಧಾರ ವನ್ನು ಪ್ರಕಟಿಸಿ ನ.8ರಂದು ಮಾಡಿದ್ದ ಭಾಷಣದಲ್ಲಿ ತಾನು ಈ ಬಗ್ಗೆಯೂ ಮಾತನಾಡಿದ್ದೆ. ಕಳೆದ 70 ವರ್ಷಗಳಿಂದಲೂ ನಡೆದುಕೊಂಡು ಬಂದಿರುವ ವ್ಯವಸ್ಥೆಯನ್ನು ಅಲುಗಾಡಿಸುವುದು ಸುಲಭವಲ್ಲ ಎನ್ನುವುದು ತನಗೆ ತಿಳಿದಿತ್ತು. ಆದರೆ ಜನತೆಯು ನೀಡಿರುವ ಬೆಂಬಲ ತನ ಹೃದಯವನ್ನು ಸ್ಪರ್ಶಿಸಿದೆ ಮತ್ತು ನೋಟು ನಿಷೇಧ ನಿರ್ಧಾರವು ಒಡ್ಡಿರುವ ಸವಾಲುಗಳನ್ನು ಎದುರಿಸುವಲ್ಲಿ ಯಶಸ್ವಿಯಾಗುತ್ತೇವೆ ಎನ್ನುವುದನ್ನು ಈ ಬೆಂಬಲವು ತನಗೆ ಮನದಟ್ಟು ಮಾಡಿದೆ ಎಂದು ಹೇಳಿದರು.
ನಗದುರಹಿತವಲ್ಲದಿದ್ದರೆ ಕಡಿಮೆ ನಗದು ಆರ್ಥಿಕತೆ ತನ್ನ ಭಾಷಣದ ಹೆಚ್ಚಿನ ಪಾಲನ್ನು ದೇಶದ ಯುವಜನತೆಗಾಗಿ ಮೀಸಲಿಟ್ಟಿದ್ದ ಮೋದಿ, ಭಾರತವನ್ನು ನಗದುರಹಿತ ಅಥವಾ ಕನಿಷ್ಠ ಕಡಿಮೆ ನಗದು ಆರ್ಥಿಕತೆಯನ್ನಾಗಿ ಪರಿವರ್ತಿಸುವಲ್ಲಿ ‘ಬದಲಾವಣೆಯ ಯೋಧ ’ರಾಗುವಂತೆ ಅವರನ್ನು ಕೇಳಿಕೊಂಡರು.
ತನಗೆ ಭಾರತದ ಯುವಜನರ ನೆರವಿನ ಅಗತ್ಯವಿದೆ. ಇದು ತಾಯ್ನಡಿನ ಸೇವೆಗಾಗಿ ತಮಗೆ ಒದಗಿರುವ ಅಮೂಲ್ಯಅವಕಾಶ ಎಂದು ಅವರೂ ತಿಳಿದುಕೊಳ್ಳಬೇಕು. ನಿಮ್ಮ ಕುಟುಂಬಗಳಲ್ಲಿ ಮತ್ತು ನಿಮ್ಮ ಪರಿಸರದಲ್ಲಿ ಇ-ವ್ಯಾಲಟ್‌ಗಳು ಅಥವಾ ಮೊಬೈಲ್ ಬ್ಯಾಂಕಿಂಗ್‌ನಂತಹ ತಂತ್ರಜ್ಞಾನಗಳ ಬಳಕೆಯ ಬಗ್ಗೆ ಗೊತ್ತಿಲ್ಲದಿರಬಹುದು. ಕನಿಷ್ಠ 10 ಕುಟುಂಬಗಳಿಗೆ ಈ ತಂತ್ರಜ್ಞಾನವನ್ನು ತಿಳಿಸಿಕೊಡಲು ದಿನದಲ್ಲಿ ಒಂದು ಗಂಟೆ ಅಥವಾ ಹೆಚ್ಚಿನ ಸಮಯವನ್ನು ವ್ಯಯಿಸಿ ಎಂದು ಹೇಳಿದರು.
ನೋಟು ನಿಷೇಧ ಕ್ರಮಕ್ಕೆ ಅಭೂತಪೂರ್ವ ಬೆಂಬಲವನ್ನು ವ್ಯಕ್ತಪಡಿಸಿದ್ದಕಾಗಿ ಜನತೆಗೆ ಧನ್ಯವಾದಗಳನ್ನು ಸಲ್ಲಿಸಿದ ಅವರು, ಬ್ಯಾಂಕುಗಳ ಮೂಲಕ ವೇತನ ಪಾವತಿಗೆ ಒತ್ತಾಯಿಸುವಂತೆ ದಿನಗೂಲಿ ನೌಕರರನ್ನು ಆಗ್ರಹಿಸಿದರು. ಇದು ದಾಖಲೆಗಳಲ್ಲಿ ಹೆಚ್ಚು ವೇತನ ಪಾವತಿಯನ್ನು ತೋರಿಸಿ ನಿಮ್ಮ ಕೈಗಳಲ್ಲಿ ಕಡಿಮೆ ಹಣವನ್ನಿಡುವ ಮೂಲಕ ನಿಮ್ಮನ್ನು ಶೋಷಿಸುವ ಪ್ರವೃತ್ತಿಗೆ ಅಂತ್ಯ ಹಾಡುತ್ತದೆ ಎಂದರು.
ಕಪ್ಪುಹಣವನ್ನು ಹೊಂದಿರುವರು ತಮ್ಮ ಹಣವನ್ನು ಬಿಳಿಯಾಗಿಸಿಕೊಳ್ಳಲು ಬಡವರ ಬ್ಯಾಂಕ್ ಖಾತೆಗಳನ್ನು ಬಳಿಸಿಕೊಳ್ಳುತ್ತಿರುವುದು ತನಗೆ ಗೊತ್ತಿದೆ ಎಂದ ಅವರು, ಇಂತಹ ತಪ್ಪುಗಳಲ್ಲಿ ಬಡವರನ್ನು ಸಿಲುಕಿಸಬೇಡಿ ಎಂದು ಕಾಳಧನಿಕರನ್ನು ಆಗ್ರಹಿಸಿದರು.
ತನ್ನ ಭಾಷಣದ ಹೆಚ್ಚಿನ ಸಮಯವನ್ನು ಮೋದಿ ನಗದುರಹಿತ ಆರ್ಥಿಕತೆಯ ಲಾಭಗಳು ಮತ್ತು ಡಿಜಿಟಲ್ ವಹಿವಾಟುಗಳ ಬಗ್ಗೆ ಮಾತನಾಡಲು ಬಳಸಿಕೊಂಡರು.







