ರಾಷ್ಟ್ರೀಯ ಯುವಜನ ಸಮ್ಮೇಳನ: ಉಡುಪಿ ಜಿಲ್ಲೆಗೆ ಪವಿತ್ರ ಶಿಲುಬೆ ಆಗಮನ

ಉಡುಪಿ, ನ.27: ಕಥೊಲಿಕ ಕ್ರೈಸ್ತ ಸಮುದಾಯದ ರಾಷ್ಟ್ರೀಯ ಯುವಜನ ಸಮ್ಮೇಳನ 2017 ಇದರ ಅಂಗವಾಗಿ ರಾಜ್ಯಾದ್ಯಂತ ಸಂಚಾರ ಆರಂಭಿಸಿರುವ ಪವಿತ್ರ ಶಿಲುಬೆಯು ರವಿವಾರ ಕಾರ್ಕಳ ಗಡಿಭಾಗವಾದ ಮಿಯಾರಿನಿಂದ ಉಡುಪಿ ಜಿಲ್ಲೆಗೆ ಆಗಮಿಸಿತು.
ಬೆಳ್ತಂಗಡಿ ಧರ್ಮಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಧರ್ಮಕೇಂದ್ರಗಳಲ್ಲಿ 20 ದಿನಗಳ ಕಾಲ ಈ ಪವಿತ್ರ ಶಿಲುಬೆ ಸಂಚರಿಸಿದ ಬಳಿಕ ಉಡುಪಿ ಧರ್ಮ ಕ್ಷೇತ್ರದ ಭಾರತೀಯ ಕೆಥೊಲಿಕ್ ಯುವ ಸಂಚಾಲನ ಇದರ ಪದಾಧಿಕಾರಿಗಳು ಬೆಳ್ತಂಗಡಿಗೆ ತೆರಳಿ ಪವಿತ್ರ ಶಿಲುಬೆಯನ್ನು ಸ್ವೀಕರಿಸಿ ಉಡುಪಿ ಧರ್ಮ ಪ್ರಾಂತ್ಯದ ಗಡಿಭಾಗದ ಮಿಯಾರಿನಲ್ಲಿರುವ ಸಂತ ಡೊಮಿನಿಕರ ಚರ್ಚಿಗೆ ತರಲಾಯಿತು.
ಬೆಳ್ತಂಗಡಿಯ ಸಂತ ಲಾರೆನ್ಸ್ ಕ್ಯಾಥೆಡ್ರಲ್‌ನಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಲಾರೆನ್ಸ್ ಮುಕ್ಕುಝಿ ನೇತೃತ್ವದಲ್ಲಿ ಪ್ರಾರ್ಥನಾ ವಿಧಿ ನೆರವೇರಿಸಲಾಯಿತು. ಬಳಿಕ ವಿಕಾರ್ ಜನರಲ್ ವಂ ಬಿನೊಯ್, ಕ್ಯಾಥೆಡ್ರಲ್ ರೆಕ್ಟರ್ ವಂ.ಜೋರ್ಜ್, ಧರ್ಮಪ್ರಾಂತ್ಯದ ಯುವ ಆಯೋಗದ ನಿರ್ದೇಶಕ ವಂ.ಶಿಬಿ ಥೋಮಸ್, ಕೋಶಾಧಿಕಾರಿ ಅರುಣ್ ಮತ್ತಿತ್ತರರು ಪವಿತ್ರ ಶಿಲುಬೆಯನ್ನು ಉಡುಪಿ ಧರ್ಮಪ್ರಾಂತ್ಯದ ಯುವ ಆಯೋಗದ ನಿರ್ದೇಶಕ ವಂ.ಎಡ್ವಿನ್ ಡಿಸೋಜ, ಅಧ್ಯಕ್ಷ ಲೊಯೆಲ್ ಡಿಸೋಜ, ಕಾರ್ಯದರ್ಶಿ ಫೆಲಿನಾ ಡಿಸೋಜ, ಸಚೇತಕ ವಾಲ್ಟರ್ ಡಿಸೋಜ, ಸಿಸ್ಟರ್ ಹಿಲ್ಡಾ ಮಸ್ಕರೇನ್ಹಸ್, ಕಾರ್ಕಳ ವಲಯ ಯುವ ನಿರ್ದೇಶಕ ವಂ.ಸುನಿಲ್, ಪ್ರಾಂತೀಯ ಐಸಿವೈಎಂ ಪ್ರತಿನಿಧಿ ವೆಲಿಡಾ ಮಸ್ಕರೇನ್ಹಸ್ ಅವರಿಗೆ ಹಸ್ತಾಂತರಿಸಲಾಯಿತು.
ಮಿಯಾರು ಚರ್ಚಿನ ವತಿಯಿಂದ ವಂ.ಮನೋಹರ್, ಐಸಿವೈಎಂ ಅಧ್ಯಕ್ಷ ಜೋಯೆಲ್ ಸಾಂತುಮಾಯೆರ್ ಶಿಲುಬೆಯನ್ನು ಸ್ವೀಕರಿಸಿದರು. ಬೆಳ್ತಂಗಡಿ ಯಿಂದ ಮಿಯಾರಿನಲ್ಲಿರುವ ಸಂತ ಡೊಮಿನಿಕರ ದೇವಾಲಯಕ್ಕೆ ತಂದ ಪವಿತ್ರ ಶಿಲುಬೆಗೆ ಅದ್ಧೂರಿಯಾದ ಸ್ವಾಗತವನ್ನು ಕೋರಲಾಯಿತು. ಬಳಿಕ ಪ್ರಾರ್ಥನಾ ವಿಧಿಯನ್ನು ನೆರವೇರಿಸಲಾಯಿತು.
ಇಂದಿನಿಂದ ಡಿ.11ರವರೆಗೆ ಉಡುಪಿ ಧರ್ಮಕ್ಷೇತ್ರದ ವ್ಯಾಪ್ತಿಯ ವಿವಿಧ ಧರ್ಮಕೇಂದ್ರಗಳಲ್ಲಿ ಈ ಶಿಲುಬೆ ಸಂಚರಿಸಲಿದ್ದು, ನ.27-28 ಮಿಯಾರು, 29 ಕಾರ್ಕಳ ನಗರ, 30 ಬೆಳ್ಮಣ್, ಡಿ.1 ಶಿರ್ವ, 2 ಪಾಂಗಾಳ - ಶಂಕರಪುರ, 3 ಕಲ್ಮಾಡಿ, 4 ಮೂಡುಬೆಳ್ಳೆ, 5 ಉಡುಪಿ, 6 ಕುಂದಾಪುರ, 7 ತ್ರಾಸಿ, 8 ಸಾಸ್ತಾನ, 9 ಬಾರ್ಕೂರು, 10 ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್‌ಗೆ ಆಗಮಿಸಲಿದೆ.
ಡಿ.11ರಂದು ಧರ್ಮ ಕ್ಷೇತ್ರದ ಮಹಾದೇವಾಲಯ ಕಲ್ಯಾಣಪುರ ಮಿಲಾಗಿಸ್ ಕ್ಯಾಥೆಡ್ರಲ್‌ನಲ್ಲಿ ಉಡುಪಿಯ ಧರ್ಮಾಧ್ಯಕ್ಷ ಅತಿ ವಂ.ಡಾ. ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಮೆರವಣಿಗೆ, ಬಲಿಪೂಜೆ, ಶಿಲುಬೆಯ ಆರಾಧನೆ ಹಾಗೂ ಅದ್ದೂರಿ ಸಮಾರೋಪ ಕಾರ್ಯಕ್ರಮ ಜರುಗಲಿದೆ. ನಂತರ ಶಿಲುಬೆಯನ್ನು ಮಂಗಳೂರು ಧರ್ಮಕ್ಷೇತ್ರಕ್ಕೆ ಹಸ್ತಾಂತರಿಸಲಾಗುವುದು.







