ಹುಚ್ಚಪ್ಪ ಮಾಸ್ಟರ್ ಜಾನಪದ ಶ್ರೀಮಂತಿಕೆಯ ವ್ಯಕ್ತಿ: ಸಚಿವ ಕಾಗೋಡು
.jpg)
ಸಾಗರ, ನ.27: ಹುಚ್ಚಪ್ಪ ಮಾಸ್ತರ್ ಜಾನಪದ ಶ್ರೀಮಂತ ವ್ಯಕ್ತಿ. ಹೋರಾಟ ಪರ, ಸಣ್ಣಾಟ, ದೊಡ್ಡಾಟದಂತಹ ಕ್ಷೇತ್ರಗಳಲ್ಲಿ ತಮ್ಮ ಕಂಠಸಿರಿ ಮೂಲಕ ಜನಾಕರ್ಷಣೆಗೆ ಪಾತ್ರವಾಗಿರುವ ಅವರು, ಬರವಣಿಗೆ ಕ್ಷೇತ್ರದಲ್ಲೂ ನಿರಂತರ ಕೃಷಿಯಿಂದ ಉನ್ನತ ಸಾಧನೆ ಮಾಡಿದವರು ಎಂದು ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಪಟ್ಟಣದ ಕಾಗೋಡು ತಿಮ್ಮಪ್ಪರಂಗಮಂದಿರದಲ್ಲಿ ರವಿವಾರ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಾನಪದ ಕಣಜ ಹಾಗೂ ಸೊರಬದ ನೇಕಾರ ಪ್ರಕಾಶನದ ಸಂಯುಕ್ತ ಆಶ್ರಯದಲ್ಲಿ ಹಿರಿಯ ಜನಪದ ವಿದ್ವಾಂಸ ಎನ್. ಹುಚ್ಚಪ್ಪಮಾಸ್ತರ್ ಅವರು ರಚಿಸಿರುವ ಹಾಗೂ ಸಂಪಾದಕತ್ವದ 4 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾದಂಬರಿ, ಕಥೆ, ಕಾವ್ಯದಂತಹ ಪ್ರಕಾರಗಳ ಮೂಲಕ ಸಮಾಜವೊಂದು ಬೆಳೆದು ಬಂದ ರೀತಿನೀತಿಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ದೀವರ ಸಮಾಜ ನಾಡಿನ ಏಳಿಗೆಗೆ ನೀಡಿದ ಕೊಡುಗೆ ಅಪಾರವಾಗಿದೆ. ಬರವಣಿಗೆ ಹಾಗೂ ಹೋರಾಟದ ಮೂಲಕ ಸಾಮಾಜಿಕ ನ್ಯಾಯ ಕೊಡಿಸುವ ಪ್ರಜ್ಞೆ ಬೆಳೆಸಲು ಸಾಧ್ಯವಿದೆ. ಇಂತಹ ಚಟುವಟಿಕೆಗಳಿಂದ ಸಮಾಜವೊಂದರ ಬೆಳವಣಿಗೆ ಶೀಘ್ರಗತಿಯಲ್ಲಿ ಆಗುತ್ತದೆ ಎಂದರು. ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜೋಗನ್ ಶಂಕರ್, ಸಮಾಜದಲ್ಲಿ ಎರಡು ರೀತಿಯ ಅಧ್ಯಯನಕಾರರು ಇರುತ್ತಾರೆ. ಸಮಾಜದ ಒಳಗೆ ಹಾಗೂ ಹೊರಗೆ ಇದ್ದು ಅಧ್ಯಯನ ನಡೆಸಿ, ಬರವಣಿಗೆ ಮೂಲಕ ಅದನ್ನು ಸಮೂಹಕ್ಕೆ ನೀಡುವ ಕೆಲಸವನ್ನು ಇವರು ಮಾಡುತ್ತಾರೆ. ಆದರೆ, ಹುಚ್ಚಪ್ಪ ಮಾಸ್ತರ್ ಅವರು ತಮ್ಮ ಕ್ಷೇತ್ರಕಾರ್ಯದ ಮೂಲಕ ಅಧ್ಯಯನ ಮಾಡಿ, ಶ್ರೇಷ್ಠಸ್ಥಾನಕ್ಕೆ ತಲುಪಿದವರು ಎಂದರು.
ಸಂಸ್ಕೃತಿ ಮತ್ತು ಸಮುದಾಯದ ಕ್ಷೇತ್ರಕಾರ್ಯದಿಂದಾಗಿ ಮೂಡಿ ಬಂದ ಈ ನಾಲ್ಕು ಕೃತಿಗಳು ಅತ್ಯಂತ ಶ್ರೇಷ್ಠತೆಯ ಸಾಲಿನಲ್ಲಿ ನಿಲ್ಲುತ್ತದೆ. ಜನಪರ, ಸಮುದಾಯಪರ ಇರುವವರ ಜೀವನ ಚರಿತ್ರೆ ಸಮುದಾಯದ ಚರಿತ್ರೆಯಾಗಿರುತ್ತದೆ. ನಮ್ಮಲ್ಲಿ ಪುಸ್ತಕಗಳನ್ನು ಓದಿ, ಹೊಸ ಪುಸ್ತಕ ಬರೆಯುವವರ ಸಂಖ್ಯೆ ಹೆಚ್ಚಿದೆ. ಆದರೆ, ಹುಚ್ಚಪ್ಪ ಮಾಸ್ತರ್ ಅವರು ಸಮುದಾಯದ ಒಳಹೊಕ್ಕು ಅಲ್ಲಿನ ಆಗುಹೋಗುಗಳನ್ನು ಕೃತಿಮೂಲಕ ದಾಖಲಿಸುವ ವಿರಳ ವಿದ್ವಾಂಸರಲ್ಲಿ ಒಬ್ಬರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎನ್.ಹುಚ್ಪಪ್ಪಮಾಸ್ತರ್ ಹಾಗೂ ಶಿವಾನಂದ ಕುಗ್ವೆ ಸಂಪಾದಕತ್ವದ ‘ಮಲೆನಾಡಿನ ಹಳೇಪೈಕರು’ ಕೃತಿಯ ಕುರಿತು ಸಾಹಿತಿ ಡಾ. ನಾ.ಡಿಸೋಜ, ಎನ್.ಹುಚ್ಚಪ್ಪ ಮಾಸ್ತರ, ಕೆ.ಎಚ್.ಶಿವಕುಮಾರ್, ಕೆ.ಎಚ್.ಜಯರಾಮ್ ಸಂಗ್ರಹದ ಜಾನಪದ ಗೀತೆಗಳ ಕೃತಿ ‘ಮುಡಿಯಲಿಲ್ಲೇಳ ಹೂವ’ ಕೃತಿಯ ಕುರಿತು ವಿದ್ವಾಂಸ ಡಾ. ಜಿ.ಎಸ್.ಭಟ್, ಎನ್.ಹುಚ್ಚಪ್ಪಮಾಸ್ತರ ರಚಿಸಿರುವ ‘ಮಲೆನಾಡು ದೀವರ ಸಾಂಸ್ಕೃತಿಕ ಸಂಕಥನ ಕೃತಿಯ ಕುರಿತು ಡಾ. ಸರ್ಫರಾಝ್ ಚಂದ್ರಗುತ್ತಿ ಾಗೂ ಲೇಖಕ ಕೆ.ದಿನೇಶ್ ಬರೆದಿರುವ ಎಚ್.ಹುಚ್ಚಪ್ಪ ಮಾಸ್ತರ್ ಅವರ ಜೀವನ ಚರಿತ್ರೆ ‘ಮರೆತೇನೆಂದರೆ ಮರೆಯಲಿ ಹ್ಯಾಂಗ’ ಕೃತಿಯ ಕುರಿತು ಪ್ರಾಚಾರ್ಯ ಡಾ. ಹಾ. ಉಮೇಶ್ ಮಾತನಾಡಿದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ನೇಕಾರ ಪ್ರಕಾಶನದ ರಾಮಕೃಷ್ಣ ಹಾಜರಿದ್ದರು. ಎನ್.ಉಷಾರಾಣಿ ಪ್ರಾರ್ಥಿಸಿದರು. ಕೆ.ಎಚ್. ಶಿವಕುಮಾರ್ ಸ್ವಾಗತಿಸಿದರು. ದೇವೇಂದ್ರ ಬೆಳೆಯೂರು ಪ್ರಾಸ್ತಾವಿಕ ಮಾತನಾಡಿದರು. ಕೆ.ಎಚ್.ಜಯರಾಮ್ ನಿರೂಪಿಸಿದರು.





