10 ತಿಂಗಳಲ್ಲಿ 121 ಏಡ್ಸ್ ಸೋಂಕಿತರು ಪತ್ತೆ
ಜಾಗೃತರಾಗಲು ಆರೋಗ್ಯಇಲಾಖೆ ಸೂಚನೆ,

ಮಡಿಕೇರಿ ನ.27: ಕೊಡಗು ಜಿಲ್ಲೆಯಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಇಳಿಮುಖವಾಗಿದೆಯಾದರು 2016ರ ಅಕ್ಟೋಬರ್ 16ನೆ ತಾರೀಕಿನ ವರೆಗಿನ ಲೆಕ್ಕಾಚಾರದ ಪ್ರಕಾರ ಒಟ್ಟು 121 ಮಂದಿ ಎಚ್‌ಐವಿ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾ ಪ್ರಭಾರ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದೇಶದಲ್ಲಿ ಎಚ್‌ಐವಿ ಸೋಂಕಿತ ರಾಜ್ಯಗಳಲ್ಲಿ ಕರ್ನಾಟಕ 5ನೆ ಸ್ಥಾನದಲ್ಲಿದ್ದು, ಕೊಡಗು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಅತ್ಯಂತ ಕಡಿಮೆ ಇದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು 685 ಮಹಿಳಾ ಲೈಂಗಿಕ ಕಾರ್ಯಕರ್ತರು ಹಾಗೂ 123 ಮಂದಿ ಪುರುಷ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವವರು ಇದ್ದಾರೆ.ಇವರುಗಳಿಗೆ ಮೂರು ತಿಂಗಳಿಗೊಮ್ಮೆ ಎಚ್‌ಐವಿ ಪರೀಕ್ಷೆ ನಡೆಸಲಾಗುತ್ತಿದ್ದು, 10 ಮಂದಿ ಮಹಿಳೆೆಯರು ಹಾಗೂ 8 ಮಂದಿ ಪುರುಷರಲ್ಲಿ ಎಚ್‌ಐವಿ ಇರುವುದು ದೃಢ ಪಟ್ಟಿದೆಯೆಂದು ಡಾ.ಶಿವಕುಮಾರ್ ತಿಳಿಸಿದರು.
ಎಚ್‌ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ 6 ವಾರದಿಂದ 18 ತಿಂಗಳ ಒಳಗಿನ 82 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ 3 ಮಕ್ಕಳು ಎಚ್‌ಐವಿ ಸೋಂಕಿಗೆ ಒಳಗಾಗಿರುವುದು ಕಂಡು ಬಂದಿದೆ. ಜಿಲ್ಲೆಯಲ್ಲಿ 2015ರಲ್ಲಿ ಮಡಿಕೆೇರಿ ತಾಲೂಕಿನಲ್ಲಿ 24, ಸೋಮವಾರಪೇಟೆ ತಾಲೂಕಿನಲ್ಲಿ 45, ವೀರಾಜಪೇಟೆ ತಾಲೂಕಿನಲ್ಲಿ 75 ,ಗಡಿಭಾಗದ ಜಿಲ್ಲೆಗಳಲ್ಲಿ 27 ಹೀಗೆ ಒಟ್ಟು 171 ಮಂದಿಯಲ್ಲಿ ಎಚ್‌ಐವಿ ಸೋಂಕಿರುವುದನ್ನು ಪತ್ತೆ ಹಚ್ಚಲಾಗಿದೆ.
2016 ಅಕ್ಟೋಬರ್ 16ರವರೆಗೆ ನಡೆಸಿದ ಪರೀಕ್ಷೆಯಲ್ಲಿ ಮಡಿಕೆೇರಿ ತಾಲೂಕು 16,ಸೋಮವಾರಪೇಟೆ ತಾಲೂಕು35,ವೀರಾಜಪೇಟೆ ತಾಲೂಕು55ಹಾಗೂ ಗಡಿ ಜಿಲ್ಲೆಗಳಲ್ಲಿ 15ಹೀಗೆ ಒಟ್ಟು 121 ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದೆ. ಕೊಡಗು ಜಿಲ್ಲೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇತರ ಜಿಲ್ಲೆಗಳಿಂದ ಲೈಂಗಿಕ ಕಾರ್ಯಕತೆಯರು ಬರುವ ಸಾಧ್ಯತೆಗಳಿರುವುದರಿಂದ ಸೋಂಕು ಹರಡುತ್ತಿರುವುದು ಗಮನಕ್ಕೆ ಬಂದಿದೆ. ಪಕ್ಕದ ಜಿಲ್ಲೆಗಳಾದ ಹಾಸನ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಹಾಗೂ ಇತರ ಊರುಗಳ ಎಚ್‌ಐವಿ ಸೋಂಕಿತರು ಕೂಡ ಕೊಡಗಿನ ಪರೀಕ್ಷಾ ಕೇಂದ್ರಗಳಲ್ಲಿ ದಾಖಲಾಗುತ್ತಿರುವುದರಿಂದ ಎಚ್‌ಐವಿ ಸೋಂಕಿತರ ಸಂಖ್ಯೆ ಹೆಚ್ಚು ಎಂದು ಗೆಚರಿಸುತ್ತದೆ. ಇದೇ ರೀತಿ ಜಿಲ್ಲೆಯ ಎಚ್‌ಐವಿ ಸೋಂಕಿತರು ಕೂಡ ಸಮಾಜಕ್ಕೆ ಅಂಜಿ ಇತರ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುವುದು ಸಾಮಾನ್ಯವಾಗಿದೆ ಎಂದು ಡಾ.ಶಿವಕುಮಾರ್ ಮಾಹಿತಿ ನೀಡಿದರು.
953 ಮಂದಿಗೆ ಚಿಕಿತ್ಸೆ
2009ರಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಎಆರ್‌ಟಿ ಕೇಂದ್ರ ಆರಂಭಗೊಂಡಿದ್ದು, 2016 ಅ. 16ರವರೆಗೆ 1397 ಎಚ್‌ಐವಿ ಸೋಂಕಿತರು ನೋಂದಾಯಿಸಲ್ಪಟ್ಟಿದ್ದಾರೆ. ಇವರಲ್ಲಿ 953 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಚ್‌ಐವಿ ಸೋಂಕಿತರಲ್ಲಿ ಕ್ಷಯರೋಗ ಸಾಮಾನ್ಯವಾಗಿದ್ದು, 2014ರಲ್ಲಿ 12 ಕ್ಷಯ ರೋಗಿಗಳಿಗೆ ಮತ್ತು 2015 ರಲ್ಲಿ 5 ಮಂದಿಗೆ ಎಚ್‌ಐವಿ ಸೋಂಕು ಕಂಡು ಬಂದಿದೆ. ಜಿಲ್ಲೆಯ ಒಟ್ಟು ಎಚ್‌ಐವಿ ಸ್ಥಿತಿಗತಿ ಬಗ್ಗೆ ಶೇಕಡಾವಾರು ಲೆಕ್ಕದ ಪ್ರಕಾರ 2014 ರಲ್ಲಿ ಹಾಗೂ 15 ರಲ್ಲಿ ಸಾಮಾನ್ಯರಲ್ಲಿ ಶೇ.0.8 ಹಾಗೂ ಗರ್ಭಿಣಿಯರಲ್ಲಿ 2014 ರಲ್ಲಿ 0.15 ಮತ್ತು 2015 ರಲ್ಲಿ 0.11 ರಷ್ಟು ಸೋಂಕಿತರು ಕಂಡು ಬಂದಿದ್ದಾರೆ. ಜಿಲ್ಲೆಯಲ್ಲಿ 38 ಐಸಿಟಿಸಿ ಕೇಂದ್ರ, 1 ಎಆರ್‌ಟಿ ಕೇಂದ್ರ, 3 ಲಿಂಕ್ ಎಆರ್‌ಟಿ ಕೇಂದ್ರ, 4 ಇಐಡಿ ಕಾರ್ಯನಿರ್ವಹಿಸುತ್ತಿದ್ದು, ಸ್ವಯಂ ಸೇವಾ ಸಂಸ್ಥೆಗಳಾದ ಆಶೋದಯ ಸಮಿತಿ, ಆಶಾ ಕಿರಣ, ಒಡಿಪಿ, ಸ್ನೇಹಾಶ್ರಯ ಸಮಿತಿ, ಸರ್ವೋದಯ ಹೆಚ್‌ಐವಿ ಬಾಧಿತರ ಸಂಘ ಇವುಗಳು ಎಚ್‌ಐವಿ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಮತ್ತು ಜಾಗೃತಿ ಮೂಡಿಸುವ ಸೇವೆಯಲ್ಲಿ ತೊಡಗಿಸಿಕೊಂಡಿವೆ ಎಂದು ಡಾ. ಶಿವಕುಮಾರ್ ತಿಳಿಸಿದರು.
ರಾಜ್ಯದಲ್ಲಿ 29,994 ಮಂದಿಗೆ ಎಚ್‌ಐವಿ ಸೋಂಕು
ಇಡೀ ವಿಶ್ವದಲ್ಲಿ 36.7 ಮಿಲಿಯನ್ ಜನರು ಎಚ್‌ಐವಿ ಸೋಂಕಿತರಾಗಿದ್ದು, ಇವರಲ್ಲಿ 15 ರಿಂದ 49 ವಯೋಮಾನವದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಭಾರತದಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ 2.1 ಮಿಲಿಯನ್ ಆಗಿದ್ದು, ಇತ್ತೀಚಿನ ವರ್ಷಗಳಲ್ಲಿ ಎಚ್‌ಐವಿ ಸೋಂಕಿತರ ಸಂಖ್ಯೆ ಶೇ.19 ರಷ್ಟು ಇಳಿಕೆಯಾಗಿದೆಯೆಂದರು. ಕರ್ನಾಟಕ ರಾಜ್ಯದಲ್ಲಿ ಒಟ್ಟು 19,48,499 ಮಂದಿಯನ್ನು ಎಚ್‌ಐವಿ ಪರೀಕ್ಷೆೆಗೆ ಒಳಪಡಿಸಲಾಗಿದ್ದು, 29,994 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಡಾ ಶಿವಕುಮಾರ್ ತಿಳಿಸಿದರು.
ಏಡ್ಸ್‌ಗೆ ಚಿಕಿತ್ಸೆ ನೀಡುವುದು ಸಾಧ್ಯ ವಿದೆಯಾದರು ಸಂಪೂರ್ಣ ಗುಣಮುಖರನ್ನಾಗಿಸುವುದು ಅಸಾಧ್ಯ ಎಂದ ಅವರು, ಅವರು, ಸುರಕ್ಷಿತ ಲೈಂಗಿಕ ಸಂಪರ್ಕಕ್ಕೆ ಸಲಹೆ ನೀಡಿದರು. ಏಡ್ಸ್ ನಿಯಂತ್ರಣಕ್ಕಾಗಿ ನೂತನ ಪ್ರಯೋಗಗಳು ನಡೆಯುತ್ತಿದೆಯಾದರು ಇದು ಯಶಸ್ವಿಯಾಗಬೇಕಾದರೆ ಸುಮಾರು 5 ವರ್ಷಗಳ ಕಾಲಾವಧಿ ಬೇಕಾಗಬಹುದೆಂದು ಅಭಿಪ್ರಾಯಪಟ್ಟರು
ಡಿ.1ರಂದು ವಿಶ್ವ ಏಡ್ಸ್ ಜಾಗೃತಿ ದಿನ
ಪ್ರತಿವರ್ಷದಂತೆ ಈ ಬಾರಿ ಕೂಡ ವಿಶ್ವ ಏಡ್ಸ್ ಜಾಗೃತಿ ದಿನವನ್ನು ಡಿ.1 ರಂದು ಆಚರಿಸಲಾಗುತ್ತಿದ್ದು, ಮಡಿಕೇರಿಯ ಕಾವೇರಿ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಡಾ. ಶಿವಕುಮಾರ್ ತಿಳಿಸಿದರು. ಎಚ್‌ಐವಿ ತಡೆಗೆ ಕೈಜೋಡಿಸಿ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವೀಕ್ಷಣಾಧಿಕಾರಿ ಸುನೀತಾ, ಆಪ್ತ ಸಮಾಲೋಚಕರಾದ ಅನಿತಾ, ಅಶ್ಮಿತ ಹಾಗೂ ಸುಮಿನಾ ಉಪಸ್ಥಿತರಿದ್ದರು.





