ನೋಟು ರದ್ದತಿ ವಿರೋಧಿಸಿ ಆರೆಸ್ಸೆಸ್ ಮುಖಂಡ ಸಿಪಿಎಂಗೆ ಸೇರ್ಪಡೆ
ತಿರುವನಂತಪುರ,ನ.27: ಹಿಂಸಾ ರಾಜಕೀಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನೋಟು ನಿಷೇಧ ನಿರ್ಧಾರವನ್ನು ವಿರೋಧಿಸಿ ಸ್ಥಳೀಯ ಆರೆಸ್ಸೆಸ್ ನಾಯಕ ಪಿ.ಪದ್ಮಕುಮಾರ್ ಅವರು ರವಿವಾರ ಸಂಘ ಪರಿವಾರದೊಂದಿಗಿನ ತನ್ನ ನಾಲ್ಕು ದಶಕಗಳ ಸಂಬಂಧವನ್ನು ಕಡಿದುಕೊಂಡು ಸಿಪಿಎಂಗೆ ಸೇರಿದರು.
ಹಿಂದೂ ಐಕ್ಯವೇದಿಯ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಪದ್ಮಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ-ಆರೆಸ್ಸೆಸ್‌ನ ಹಿಂಸಾ ರಾಜಕೀಯ ಮತ್ತು ಅಮಾನವೀಯ ನಿಲುವಿನಿಂದ ಬೇಸತ್ತು ರಾಜ್ಯದಲ್ಲಿಯ ಆಡಳಿತ ಸಿಪಿಎಂ ಅನ್ನು ಸೇರಲು ನಿರ್ಧರಿಸಿರುವುದಾಗಿ ತಿಳಿಸಿದರು.
ಆರೆಸ್ಸೆಸ್-ಬಿಜೆಪಿಯ ಅಮಾನವೀಯ ನಿಲುವು ಮತ್ತು ಹಿಂಸಾ ರಾಜಕೀಯದಿಂದಾಗಿ ಅವೆಷ್ಟೋ ಕುಟುಂಬಗಳು ಅನಾಥವಾಗಿವೆ ಎಂದು ಅವರು ಆರೋಪಿಸಿದರು.
ತಾನು ಆರೆಸ್ಸೆಸ್‌ನ ಅಮಾನವೀಯ ನಿಲುವಿಗೆ ಮತ್ತು ಅದರ ಹಿಂಸಾ ರಾಜಕೀಯಕ್ಕೆ ವಿರುದ್ಧವಾಗಿದ್ದೇನೆ. 500 ಮತ್ತು 1,000 ರೂ.ನೋಟುಗಳ ನಿಷೇಧ ಅತಿರೇಕದ ಕ್ರಮವಾಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ತಾನು ಆರೆಸ್ಸೆಸ್ ತೊರೆದಿರುವುದಾಗಿ ಅವರು ಹೇಳಿದರು.





