ಕಾಯಿಲೆಗಳಿಗೆ ಹೆಚ್ಚಿನ ಬಿಎಸ್‌ಎಫ್ ಯೋಧರು ಬಲಿ
ಹೊಸದಿಲ್ಲಿ,ನ.27: ಕಳೆದ ಎರಡು ವರ್ಷಗಳಲ್ಲಿ ಗಡಿರಕ್ಷಣೆ ಮತ್ತು ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ಮೃತಪಟ್ಟವರಿಗಿಂತ ಹೃದಯಾಘಾತ ಮತ್ತು ಇತರ ರೋಗಗಳಿಗೆ ಬಲಿಯಾಗಿರುವ ಬಿಎಸ್‌ಎಫ್ ಯೋಧರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಅಧಿಕೃತ ದತ್ತಾಂಶಗಳು ಬೆಟ್ಟು ಮಾಡಿವೆ.
ಭಾರತ ಮತ್ತು ಪಾಕಿಸ್ತಾನಗಳ ನಡುವೆ ಇತ್ತೀಚೆಗೆೆ ತಲೆದೋರಿರುವ ಉದ್ವಿಗ್ನತೆಯ ನಡುವೆಯೇ ದೇಶದ ಅತ್ಯಂತ ದೊಡ್ಡ ಗಡಿರಕ್ಷಣಾ ಪಡೆಯಾಗಿರುವ ಬಿಎಸ್‌ಎಫ್‌ನ ಪುರುಷ ಮತ್ತು ಮಹಿಳಾ ಸಿಬ್ಬಂದಿ ಶತ್ರುದೇಶದ ಗುಂಡುಗಳು ಮತ್ತು ಮಾರ್ಟರ್ ದಾಳಿಗಳನ್ನು ಎದುರಿಸುತ್ತಿದ್ದರೆ, 2015,ಜನವರಿ-2016,ಸೆಪ್ಟಂಬರ್ ಅವಧಿಯಲ್ಲಿ ಪಡೆಯು ಕಳೆದುಕೊಂಡಿರುವ 774 ಸಿಬ್ಬಂದಿಯ ಪೈಕಿ ಕೇವಲ 25 ಸಾವುಗಳು ಹೋರಾಟ ಕಾರ್ಯಾಚರಣೆಗಳಲ್ಲಿ ಸಂಭವಿಸಿವೆ.
316 ಯೋಧರು ವಿವಿಧ ಕಾಯಿಲೆಗಳಿಂದ ಮೃತಪಟ್ಟಿದ್ದರೆ, 117 ಯೋಧರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಈ ಅವಧಿಯಲ್ಲಿ ಪಡೆಯಲ್ಲಿ ಎಚ್‌ಐವಿ/ಏಡ್ಸ್ ಮತ್ತು ಮಲೇರಿಯಾದಿಂದ ಅಸು ನೀಗಿದವರ ಸಂಖ್ಯೆ ಕಡಿಮೆಯಾಗಿದ್ದರೆ, ರೈಲು,ರಸ್ತೆ ಮತ್ತು ಬೈಕ್ ಅಪಘಾತಗಳಲ್ಲಿ ಸಿಬ್ಬಂದಿಯ ಸಾವಿನ ಓಟ ಮುಂದುವರಿದಿದೆ. 192 ಯೋಧರು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದರೆ, ಎಚ್‌ಐವಿ/ಏಡ್ಸ್ ನಿಂದಾಗಿ 18, ಕ್ಯಾನ್ಸರ್‌ನಿಂದ 38 ಮತ್ತು ಮಲೇರಿಯಾದಿಂದ ಐವರು ಯೋಧರು ಮೃತಪಟ್ಟಿದ್ದಾರೆ. ಕಾರ್ಯಾಚರಣೆಗಳಲ್ಲಿ ಕೇವಲ 25 ಯೋಧರು ಮೃತಪಟ್ಟಿದ್ದರೆ, 749 ಯೋಧರು ಕಾಯಿಲೆಗಳು,ಅಪಘಾತಗಳಿಗೆ ಬಲಿಯಾಗಿದ್ದಾರೆ. ಇದು ಕಳವಳದ ವಿಷಯವಾಗಿದ್ದು, ಸಾವುಗಳ ಸಂಖ್ಯೆಯನ್ನು ತಗ್ಗಿಸುವುದು ಮುಖ್ಯವಾಗಿದೆ. ಯೋಧರು ಆರೋಗ್ಯಪೂರ್ಣ ಜೀವನಶೈಲಿ ಮತ್ತು ಸುರಕ್ಷಿತ ಚಾಲನೆಯ ಪ್ರವೃತ್ತಿಯನ್ನು ಹೊಂದಿರಲು ಹಲವಾರು ಅಗತ್ಯ ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹಿರಿಯ ಬಿಎಸ್‌ಎಫ್ ಅಧಿಕಾರಿಯೋರ್ವರು ತಿಳಿಸಿದರು.





