ಗುಜರಾತ್: 18 ಸಾವಿರ ಕೈಗಾರಿಕೆಗಳು ಸಂಕಷ್ಟದಲ್ಲಿ
ನಗದು ಬಿಕ್ಕಟ್ಟು : ಪ್ರಧಾನಿ, ಆರ್‌ಬಿಐ ಮಧ್ಯೆಪ್ರವೇಶಕ್ಕೆ ಒತ್ತಾಯ
ವಡೋದರ, ನ.27: ಅಧಿಕ ಮುಖಬೆಲೆಯ ನೋಟು ಅಮಾನ್ಯಗೊಳಿಸಿದ ಬಳಿಕ ತಮ್ಮ ವ್ಯಾಪಾರ, ವಹಿವಾಟು ಬಹುತೇಕ ಸ್ಥಗಿತಗೊಂಡಿದೆ ಎಂದು ಅಳಲು ತೋಡಿಕೊಂಡಿರುವ ಗುಜರಾತ್‌ನ ವರ್ತಕರು ಹಣದ ಕೊರತೆಯನ್ನು ಸರಿದೂಗಿಸಲು ಪ್ರಧಾನಿ ಮತ್ತು ರಿಸರ್ವ್ ಬ್ಯಾಂಕ್ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸರಕಾರದ ಅನಿರೀಕ್ಷಿತ ನಿರ್ಧಾರದಿಂದ ವರ್ತಕರು ತಮ್ಮ ಅಂಗಡಿಗಳ ಬಾಗಿಲು ಮುಚ್ಚುವ ಸ್ಥಿತಿ ಬಂದಿದೆ. ಹಣದ ಕೊರತೆಯ ಕಾರಣ ವ್ಯವಹಾರಕ್ಕೆ ತೊಂದರೆಯಾಗಿದೆ ಎಂದು ಅಖಿಲ ಭಾರತ ವರ್ತಕರ ಸಂಘಟನೆಯ ಗುಜರಾತ್ ಘಟಕದ ಅಧ್ಯಕ್ಷ ಪ್ರಮೋದ್ ಭಗತ್ ತಿಳಿಸಿದ್ದಾರೆ. ದಿನ ಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ತಮ್ಮ ಬ್ಯಾಂಕ್ ಖಾತೆಗಳಿಂದ ಹಣ ಪಡೆಯಲು ನಿರ್ಬಂಧ ಇರುವ ಕಾರಣ ವರ್ತಕರಿಗೆ ಸಮಸ್ಯೆಯಾಗಿದೆ. ಅಲ್ಲದೆ ಚಾಲ್ತಿ ಖಾತೆ(ಕರೆಂಟ್ ಅಕೌಂಟ್)ಯಿಂದ ಹಣ ಪಡೆಯಲು ಇರುವ ಮಿತಿಯನ್ನು ಹಿಂಪಡೆಯಬೇಕು. 50 ಮತ್ತು 100 ರೂ. ನೋಟುಗಳು ಚಲಾವಣೆಯಲ್ಲಿ ಕಡಿಮೆ ಇರುವ ಕಾರಣ ಸಮಸ್ಯೆಯಾಗಿದೆ. ಚಾಲ್ತಿ ಖಾತೆಯಿಂದ ವಾರಕ್ಕೆ 50 ಸಾವಿರ ಮೊತ್ತ ಹಿಂಪಡೆಯಲು ಮಿತಿ ವಿಧಿಸಲಾಗಿದೆ. ಆದರೆ ಇದರಿಂದ ವ್ಯಾಪಾರ ನಡೆಸಲು ಸಾಧ್ಯವಿಲ್ಲ. ತಿಂಗಳಿಗೆ 2 ಲಕ್ಷ ಹಣದಲ್ಲಿ ಬಾಡಿಗೆ, ಸಿಬ್ಬಂದಿಯ ವೇತನ, ಇತರ ದೈನಂದಿನ ವೆಚ್ಚಗಳನ್ನು ಸರಿಹೊಂದಿಸಲು ಕಷ್ಟವಾಗುತ್ತಿದೆ ಎಂದವರು ಹೇಳಿದ್ದಾರೆ. ಹಣದ ಕೊರತೆಯಿಂದ ಗುಜರಾತ್‌ನ ವಾಣಿಜ್ಯ ಕೇಂದ್ರವಾಗಿರುವ ವಡೋದರದಲ್ಲಿ ಸುಮಾರು 18 ಸಾವಿರ ಸಣ್ಣ ಕೈಗಾರಿಕಾ ಘಟಕಗಳಿಗೆ ಸಮಸ್ಯೆಯಾಗಿದೆ ಎಂದು ವಡೋದರ ವಾಣಿಜ್ಯ ಮತ್ತು ಕೈಗಾರಿಕೆ ಮಂಡಳಿ ಅಧ್ಯಕ್ಷ ನೀಲೇಶ್ ಶುಕ್ಷ ಹೇಳಿದ್ದಾರೆ. 50, 100 ಮತ್ತು 500 ರೂ. ಮುಖಬೆಲೆಯ ನೋಟುಗಳ ಕೊರತೆಯಿಂದ ಚೋಟಾ ಉದೆಪುರ್ ಜಿಲ್ಲೆಯಲ್ಲಿ ಎಪಿಎಂಸಿ ಸಂಸ್ಥೆಗಳು ಬಹುತೇಕ ಕಾರ್ಯಾಚರಣೆ ಸ್ಥಗಿತಗೊಳಿಸಿವೆ ಎಂದು ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ನರಣ್‌ಭಾಯಿ ರಾಥ್ವಾ ತಿಳಿಸಿದ್ದಾರೆ.





