ಕ್ಯೂಬಾದಲ್ಲಿ 9 ದಿನಗಳ ಶೋಕಾಚರಣೆ
ಹವಾನಾ,ನ.27: ಕ್ರಾಂತಿಕಾರಿ ನಾಯಕ ಫಿಡೆಲ್‌ಕ್ಯಾಸ್ಟ್ರೊ ಅವರ ನಿಧನದ ಹಿನ್ನೆಲೆಯಲ್ಲಿ ಕ್ಯೂಬಾ ಒಂಬತ್ತು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಫಿಡೆಲ್‌ಕ್ಯಾಸ್ಟ್ರೊ ಶನಿವಾರ ರಾತ್ರಿ 10:29ಕ್ಕೆ ನಿಧನಹೊಂದಿದರೆಂದು ಅವರ ಉತ್ತರಾಧಿಕಾರಿ ಹಾಗೂ ಸಹೋದರ ರವುಲ್ ಕ್ಯಾಸ್ಟ್ರೋ ಪ್ರಕಟಿಸಿದ ಬಳಿಕ ರಾಷ್ಟ್ರಾದ್ಯಂತ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಎಲ್ಲೆಡೆಯೂ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಇಳಿಸಲಾಗಿದೆ. ಕ್ಯಾಸ್ಟ್ರೊ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಹವಾನಾದ ಪ್ರಸಿದ್ಧ ಕ್ರಾಂತಿಕಾರಿ ಚೌಕದಲ್ಲಿ ಬೃಹತ್ ರ್ಯಾಲಿಗಳನ್ನು ಆಯೋಜಿಸಲಾಗಿದೆ. 1.10 ಕೋಟಿ ಜನಸಂಖ್ಯೆಯ ಈ ದ್ವೀಪರಾಷ್ಟ್ರದಲ್ಲಿ ರವಿವಾರದ ಎಲ್ಲಾ ದಿನಪತ್ರಿಕೆಗಳು ಕಪ್ಪು ಬಣ್ಣದಲ್ಲಿಯೇ ಮುದ್ರಿತಗೊಂಡವು.
ಕ್ಯಾಸ್ಟ್ರೊ ವಿದ್ಯಾಭ್ಯಾಸ ಮಾಡಿದ್ದ ಹವಾನ ವಿವಿಯಲ್ಲಿ ನೂರಾರು ಶೋಕತಪ್ತ ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ಹಿಡಿದು ‘ನಾನು ಫಿಡೆಲ್’ ಎಂದು ಘೋಷಣೆಗಳನ್ನು ಕೂಗುತ್ತಾ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಶನಿವಾರದಂದು ಸೇನಾಪಡೆ ಹಾಗೂ ಸರಕಾರದ ಸಕಲ ಗೌರವಗಳೊಂದಿಗೆ ಕ್ಯಾಸ್ಟ್ರೊ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯಲಿದೆ. ಆನಂತರ ಅವರ ಚಿತಾಭಸ್ಮವನ್ನು ಕ್ಯೂಬಾದ್ಯಂತ ಕೊಂಡೊಯ್ಯಲಾಗುವುದು.
ಡಿಸೆಂಬರ್ 4ರಂದು ಹವಾನಾದ ಕ್ರಾಂತಿಕಾರಿ ಚೌಕದಲ್ಲಿ ನಡೆಯಲಿರುವ ಶ್ರದ್ಧಾಂಜಲಿ ಸಭೆಯಲ್ಲಿ ದೇಶವಿದೇಶಗಳ ಗಣ್ಯರು ಪಾಲ್ಗೊಳ್ಳ್ಳಲಿದ್ದಾರೆಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ. ರಾಜಕೀಯದ ಬಳಿಕ ಕ್ಯಾಸ್ಟ್ರೊ ಅತಿ ಹೆಚ್ಚು ಪ್ರೀತಿಸುತ್ತಿದ್ದ ಬೇಸ್‌ಬಾಲ್ ಕ್ರೀಡಾಕೂಟಗಳನ್ನು ಶೋಕಾಚರಣೆಯ ಒಂಬತ್ತು ದಿನಗಳ ಕಾಲ ರದ್ದುಪಡಿಸಲಾಗಿದೆ.
ಕ್ಯೂಬಾದ ಸರಕಾರಿ ಟಿವಿ, ವಿದ್ಯಾರ್ಥಿ ಸಂಘಗಳು ಹಾಗೂ ಮಹಿಳಾ ಒಕ್ಕೂಟಗಳು ಫಿಡೆಲ್ ಕ್ಯಾಸ್ಟ್ರೊ ನಿಧನದ ಶೋಕಾರ್ಥವಾಗಿ ಸಣ್ಣಪುಟ್ಟ ರ್ಯಾಲಿಗಳನ್ನು ಆಯೋಜಿಸಿವೆ ಹಾಗೂ ಕಮ್ಯೂನಿಸ್ಟ್ ಕ್ರಾಂತಿಗೆ ತಮ್ಮ ಬೆಂಬಲದ ಪ್ರತಿಜ್ಞೆ ಮಾಡಲಿವೆ.







