ಮರುಮತ ಎಣಿಕೆಗೆ ಹಿಲರಿ ಪಾಳಯ ಬೆಂಬಲ
ವಾಶಿಂಗ್ಟನ್,ನ.27: ಇತ್ತೀಚೆಗೆ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿರುವುದು ತನ್ನ ಗಮನಕ್ಕೆ ಬಂದಿಲ್ಲವಾದರೂ, ವಿಸ್ಕನ್‌ಸಿನ್ ರಾಜ್ಯದ ಮತಗಳ ಮರುಎಣಿಕೆಯಲ್ಲಿ ತಾನು ಪಾಲ್ಗೊಳ್ಳುವುದಾಗಿ ಡೆಮಾಕ್ರಾಟಿಕ್ ಪಕ್ಷದ ಪರಾಜಿತ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರ ಚುನಾವಣಾ ಪ್ರಚಾರ ಸಮಿತಿಯು ರವಿವಾರ ಘೋಷಿಸಿದೆ.
ಟ್ರಂಪ್ ಹಾಗೂ ಹಿಲರಿ ನಡುವೆ ಅತ್ಯಂತ ನಿಕಟ ಸ್ಪರ್ಧೆ ನಡೆದ ಇತರ ರಾಜ್ಯಗಳಾದ ಮಿಶಿಗನ್ ಹಾಗೂ ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿಯೂ ಒಂದು ವೇಳೆ ಮರು ಮತಎಣಿಕೆ ನಡೆದಲ್ಲಿ ಅಲ್ಲೂ ತಾನು ಪಾಲ್ಗೊಳ್ಳುವುದಾಗಿ ಡೆಮಾಕ್ರಾಟಿಕ್ ಅಭ್ಯರ್ಥಿಯ ಚುನಾವಣಾ ನ್ಯಾಯವಾದಿ ಮಾರ್ಕ್ ಎರಿಕ್ ಎಲಿಯಾಸ್ ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಟ್ರಂಪ್ ಅವರು ಮಿಶಿಗನ್, ಪೆನ್ಸಿಲ್ವೇನಿಯಾ ಹಾಗೂ ವಿಸ್ಕನ್‌ಸಿನ್ ರಾಜ್ಯಗಳಲ್ಲಿ ಹಿಲರಿ ವಿರುದ್ಧ ಕೇವಲ 1 ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು.
‘‘ಚುನಾವಣೆಯಲ್ಲಿ ಹ್ಯಾಕಿಂಗ್ ನಡೆದಿರುವ ಬಗ್ಗೆ ಅಥವಾ ಮತಯಂತ್ರದ ತಂತ್ರಜ್ಞಾನವನ್ನು ಬದಲಾಯಿಸಲು ಪ್ರಯತ್ನಿಸಿರುವ ಬಗ್ಗೆ ಯಾವುದೇ ಪುರಾವೆಗಳು ಲಭಿಸಿಲ್ಲ. ಆದರೆ ಮರುಮತ ಎಣಿಕೆಯು ಎಲ್ಲಾ ರೀತಿಯಿಂದಲೂ ನ್ಯಾಯ ಸಮ್ಮತವಾಗಿ ನಡೆಯುವುದನ್ನು ಖಾತರಿಪಡಿಸುವ ಉದ್ದೇಶದಿಂದ ನಾವು ಅದರಲ್ಲಿ ಭಾಗವಹಿಸಲು ಬಯಸುತ್ತೇವೆ ’’ ಎಂದವರು ತಿಳಿಸಿದರು.
ವಿಸ್ಕನ್‌ಸಿನ್‌ನಲ್ಲಿ ಮರುಮತ ಎಣಿಕೆ ನಡೆದರೂ, ಅಂತಿಮ ಫಲಿತಾಂಶ ತಿರುವುಮುರುವಾಗುವ ಸಾಧ್ಯತೆ ತೀರಾ ಕಡಿಮೆಯೆನ್ನಲಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಸ್ಕನ್‌ಸಿನ್‌ನಲ್ಲಿ ಹಿಲರಿ 20 ಸಾವಿರ ಮತಗಳ ಅಂತರದಲ್ಲಿ ಸೋಲಪ್ಪಿದ್ದರೆ, ಪೆನ್ಸಿಲ್ವೇನಿಯಾದಲ್ಲಿ 70 ಸಾವಿರ ಹಾಗೂ ಮಿಶಿಗನ್‌ನಲ್ಲಿ 10 ಸಾವಿರ ಮತಗಳಿಂದ ಪರಾಭವಗೊಂಡಿದ್ದರು.







