ಬಾರ್ ಮಾಲಕರ ಕೊಲೆ ಯತ್ನ : ಬಿಜೆಪಿ ಶಾಸಕನ ಪುತ್ರರು ಪೊಲೀಸರಿಗೆ ಶರಣು

ನಾಗ್ಪುರ,ನ.28: ಕ್ಲೌಡ್ 7 ಬಾರ್ ಮಾಲಕನ ಜತೆ ಜಗಳವಾಡಿ ಆತನ ಹತ್ಯೆಗೆ ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕೃಷ್ಣ ಖೋಪ್ಡೆಯವರ ಇಬ್ಬರು ಮಕ್ಕಳು ಕೊನೆಗೂ ಪೊಲೀಸರಿಗೆ ಶರಣಾಗಿದ್ದಾರೆ.
ಅಖಿಲೇಶ್ ಹಾಗೂ ರೋಹಿತ್ ಖೋಪ್ಡೆ ಅಂಬಝರಿ ಠಾಣೆಯಲ್ಲಿ ರವಿವಾರ ರಾತ್ರಿ ಶರಣಾಗಿದ್ದಾರೆ ಎಂದು ಡಿಸಿಪಿ ರಜನ್ ಶರ್ಮಾ ಪ್ರಕಟಿಸಿದ್ದಾರೆ.
ರಾತ್ರಿ 10.30ರ ವೇಳೆಗೆ ಮೂವರು ಸಹಚರರೊಂದಿಗೆ ಆಗಮಿಸಿ ಶರಣಾದರು. ಇದಕ್ಕೂ ಮುನ್ನ ಪೊಲೀಸರು ಖೋಪ್ಡೆಯವರ ಸತ್ರಾಂಜಿನಪುರ ನಿವಾಸದಲ್ಲಿ ಶನಿವಾರ ತಪಾಸಣೆ ಕೈಗೊಂಡಿದ್ದರು. ರೋಹಿತ್ ಆಗ ತಲೆ ಮರೆಸಿಕೊಂಡಿದ್ದ. ಆರೋಪಿಗಳನ್ನು ತಕ್ಷಣ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ. ಒಂದು ವಾರದ ಕಾಲ ಕೊಲೆ ಯತ್ನ ಆರೋಪ ಎದುರಿಸುತ್ತಿರುವ ಮಕ್ಕಳನ್ನು ರಕ್ಷಿಸಿಕೊಂಡು ಬಂದಿದ್ದ ಶಾಸಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದರು.
ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ. ಬಾರ್‌ನಲ್ಲಿ ನಡೆದ ಘರ್ಷಣೆ ವೇಳೆ ಅಖಿಲೇಶ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ. ಈತನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೂ ಪೊಲೀಸರು ಎಚ್ಚರಿಕೆ ನೀಡಿ, ಅನಗತ್ಯವಾಗಿ ವಿಳಂಬ ಮಾಡಿ ಆಸ್ಪತ್ರೆಯಲ್ಲಿ ಆರೋಪಿಯನ್ನು ಇಟ್ಟುಕೊಂಡರೆ, ಅವರ ವಿರುದ್ಧವೂ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದ್ದರು.





