ನಾಭಾ ಜೈಲಿನಿಂದ ಪರಾರಿಯಾಗಿದ್ದ ಖಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಮಿಂಟೂ ಸೆರೆ

ಅಮೃತಸರ, ನ.28: ಪಂಜಾಬ್ ನ ನಾಭಾ ಜೈಲಿನಿಂದ ಐವರು ಕೈದಿಗಳೊಂದಿಗೆ ಪರಾರಿಯಾಗಿದ್ದ ನಿಷೇಧಿತ ಉಗ್ರ ಸಂಘಟನೆ ಖಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮೀಂದರ್ ಸಿಂಗ್ ಮಿಂಟೂನನ್ನು ಪೊಲೀಸರು ಬಂಧಿಸಿದ್ದಾರೆ.
ದಿಲ್ಲಿ ಮತ್ತು ಪಂಜಾಬ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಿಂಟೂನನ್ನು ದಿಲ್ಲಿಯಲ್ಲಿ ಸೆರೆ ಹಿಡಿಯಲಾಗಿದೆ. ಈತನೊಂದಿಗೆ ಪರಾರಿಯಾಗಿದ್ದ ಇತರ ಐದು ಮಂದಿ ಕೈದಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ರವಿವಾರ ಬೆಳಗ್ಗೆ ಶಸ್ತ್ರಾಸ್ತ್ರಧಾರಿಗಳ ಗುಂಪೊಂದು ನಾಭಾ ಜೈಲಿಗೆ ದಾಳಿ ಮಾಡಿದ್ದರು. ಬಳಿಕ ಹರ್ಮೀಂದರ್ ಸಿಂಗ್ ಮಿಂಟೂ ಸೇರಿದಂತೆ ಆರು ಕೈದಿಗಳೊಂದಿಗೆ ಪರಾರಿಯಾಗಿದ್ದರು.
ಪೊಲೀಸರ ಸಮವಸ್ತ್ರ ಧರಿಸಿ ಆಗಮಿಸಿದ್ದ 10 ಮಂದಿ ಶಸ್ತ್ರಾಸ್ತ್ರಧಾರಿಗಳು ಜೈಲಿನ ಒಳ ನುಗ್ಗಿ ನೂರು ಸುತ್ತು ಗುಂಡು ಹಾರಿಸಿ ಭಯದ ವಾತಾವರಣ ಸೃಷ್ಠಿಸಿದ್ದರು. ಬಂಧನದಲ್ಲಿದ್ದ ಖಲಿಸ್ತಾನ ವಿಮೋಚನಾ ದಳದ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ , ಗ್ಯಾಂಗಸ್ಟರ‍್ ಗಳಾಧ ಗುರ್ಪ್ರೀತ್ ಸಿಂಗ್, ವಿಕಿ, ಗೋಂಧ್ರಾ, ನಿತಿನ್ ಡಿಯೋಲ್ ಹಾಗೂ ವಿಕ್ರಮ ಜೀತ್ ಸಿಂಗ್ ವಿಕಿ ಜೊತೆ ಪರಾರಿಯಾಗಿದ್ದರು.





