ಮಿಲಿಯನ್ ಗಟ್ಟಲೆ ಮತದಾರರಿಂದ ಅಕ್ರಮ ಮತದಾನ: ಟ್ರಂಪ್ ಆರೋಪ!
.jpg)
ವಾಷಿಂಗ್ಟನ್, ನ.28: ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರ ಕೆಲ ರಾಜ್ಯಗಳ ಮತ ಹ್ಯಾಕ್ ಮಾಡಲಾಗಿದೆ ಎಂದು ಪರಾಜಿತ ಅಭ್ಯರ್ಥಿ ಹಿಲರಿ ಕ್ಲಿಂಟನ್ ಬೆಂಬಲಿಗರು ಆರೋಪ ಮಾಡಿರುವ ಬೆನ್ನಲ್ಲೇ, ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. "ಹಿಲರಿ ಕ್ಲಿಂಟನ್ ಪರವಾಗಿ ಹಲವೆಡೆಗಳಲ್ಲಿ ಅಕ್ರಮ ಮತದಾನ ನಡೆದಿದೆ. ಇಲ್ಲದಿದ್ದರೆ ಅತ್ಯಧಿಕ ಮತಗಳ ಅಂತರದಿಂದ ಜಯ ಸಾಧಿಸುತ್ತಿದ್ದೆ" ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.
ಟ್ರಂಪ್ ಜಯ ಸಾಧಿಸಿ ಶ್ವೇತಭವನದ ಅಧಿಕಾರದ ಗದ್ದುಗೆ ಹಿಡಿದಿದ್ದರೂ, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಪಾಪ್ಯುಲರ್ ವೋಟ್ ಆಧಾರದಲ್ಲಿ 20 ಲಕ್ಷ ಮತಗಳ ಮುನ್ನಡೆಯಲಿದ್ದರು. ಚುನಾವಣಾ ಅಕ್ರಮಗಳು ನಡೆಯದಿದ್ದರೆ ಪಾಪ್ಯುಲರ್ ವೋಟ್ ನಲ್ಲೂ ಭಾರಿ ಅಂತರದಿಂದ ಗೆಲ್ಲುತ್ತಿದ್ದೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
"ನಾನು ಪ್ರಚಾರ ಮಾಡಿದ 15 ರಾಜ್ಯಗಳ ಬದಲಾಗಿ ಕೇವಲ 3-4 ರಾಜ್ಯಗಳಲ್ಲಿ ಪ್ರಚಾರ ಮಾಡಿ ಜನಪ್ರಿಯ ಮತಗಳಲ್ಲೂ ಗೆಲುವು ಸಾಧಿಸಬಹುದಿತ್ತು. ಗೆಲುವು ಸುಲಭದ ತುತ್ತಾಗುತ್ತಿತ್ತು" ಎಂದು ವಿವರಿಸಿದ್ದಾರೆ. ಇದೇ ಮೊಟ್ಟಮೊದಲ ಬಾರಿಗೆ ವಿಜೇತ ಅಭ್ಯರ್ಥಿ, ಅಕ್ರಮ ಮತದಾನದ ಬಗ್ಗೆ ಆರೋಪ ಮಾಡಿದ್ದು, ಇದಕ್ಕೆ ಅಗತ್ಯವಾದ ಯಾವ ಪುರಾವೆಯನ್ನೂ ಒದಗಿಸಿಲ್ಲ. ವಿರ್ಜಿನಿಯಾ, ನ್ಯೂ ಹ್ಯಾಂಪ್ಶೈರ್ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು, ಮಾಧ್ಯಮಗಳು ಇದನ್ನೇಕೆ ವರದಿ ಮಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.







