ಮೀಸಲಾತಿಗೆ ಆಗ್ರಹಿಸಿ ಪುಣೆಯಲ್ಲಿ ದಲಿತರು, ಒಬಿಸಿ ಹಾಗೂ ಅಲ್ಪಸಂಖ್ಯಾತರ ಬೃಹತ್ ರ್ಯಾಲಿ

ಪುಣೆ, ನ.28: ಒಂದು ಲಕ್ಷಕ್ಕಿಂತಲೂ ಅಧಿಕ ಮಂದಿ ದಲಿತರು, ಒಬಿಸಿ ಹಾಗೂ ಅಲ್ಪಸಂಖ್ಯಾತರು ನಗರದಲ್ಲಿ ರವಿವಾರ ಬೃಹತ್ ರ್ಯಾಲಿ ನಡೆಸಿ, ಸೂಕ್ತ ಮೀಸಲಾತಿ ಸೌಲಭ್ಯಕ್ಕೆ ಒತ್ತಾಯಿಸಿದರು. ಸಂವಿಧಾನ ಸನ್ಮಾನ್ ಮೂಕ ಮಾರ್ಚ್ ರ್ಯಾಲಿಯಲ್ಲಿ ಇತರ ಹಲವು ಬೇಡಿಕೆಗಳನ್ನು ಮಂಡಿಸಲಾಯಿತು.
ಆರ್ಥಿಕ ಹಾಗೂ ಸಾಮಾಜಿಕ ಬೇಡಿಕೆಗಳನ್ನು ಮುಂದಿಟ್ಟು ಮರಾಠ ಸಮುದಾಯದವರು ಎರಡು ತಿಂಗಳ ಹಿಂದೆ ಕೈಗೊಂಡ ಬೃಹತ್ ಪ್ರತಿಭಟನೆಗೆ ಉತ್ತರವಾಗಿ, ಸಂವಿಧಾನ ಸನ್ಮಾನ ಮೋರ್ಚಾ ಈ ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ ಈ ಮೂಕ ಪ್ರತಿಭಟನೆ ನಮ್ಮ ಅಹವಾಲುಗಳ ಪರಿಹಾರಕ್ಕೆ ಆಗ್ರಹಿಸಿ ನಡೆಸಲಾಗಿದೆಯೇ ವಿನಃ ಇದು ಯಾರ ವಿರುದ್ಧವೂ ಅಲ್ಲ ಅಂದು ಸ್ಪಷ್ಟಪಡಿಸಲಾಗಿದೆ.
ಪುಣೆ, ಸುತ್ತಮುತ್ತಲ ನಗರಗಳು ಹಾಗೂ ಜಿಲ್ಲೆಯಿಂದ ಆಗಮಿಸಿದ್ದ ಒಂದು ಲಕ್ಷಕ್ಕೂ ಅಧಿಕ ಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಪ್ರತಿಭಟನೆಯಲ್ಲಿ 17 ಲಕ್ಷ ಮಂದಿ ಪಾಲ್ಗೊಂಡಿದ್ದಾಗಿ ಸಂಘಟಕರು ಹೇಳಿಕೊಂಡಿದ್ದಾರೆ.
ಅಲ್ಪಸಂಖ್ಯಾತರು ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು. ಪರಿಶಿಷ್ಟರ ದೌರ್ಜನ್ಯ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.





