ಶ್ರಮಿಕ ಸಂಘದಿಂದ ಆಕ್ರೋಶ ದಿನಾಚರಣೆ!

ಮಂಗಳೂರು, ನ.28: ಕೇಂದ್ರ ಸರಕಾರವು 500 ರೂ. ಮತ್ತು 1000 ರೂ.ಗಳ ನೋಟುಗಳನ್ನು ನಿಷೇಧದಿಂದ ಜನಸಾಮಾನ್ಯರ ತೊಂದರೆಗಳ ಬಗ್ಗೆ ಆಕ್ರೋಶ ದಿನಕ್ಕೆ ಕರೆ ನೀಡಲಾಗಿರುವ ಹಿನ್ನೆಲೆಯಲ್ಲಿ ಸಿಐಟಿಯು ನೇತೃತ್ವದ ಮಂಗಳೂರು ಬಂದರಿನ ಶ್ರಮಿಕ ಸಂಘದಿಂದ ಮೆರವಣಿಗೆ, ಪ್ರತಿಭಟನೆ ನಡೆಯಿತು.
ಬಂದರು ಧಕ್ಕೆ ಕಚೇರಿಯಿಂದ ಬಂದರಿನ ಕೆಸಿಸಿಐ ಕಚೇರಿ ಎದುರುವರೆಗೆ ಮೆರವಣಿಗೆ ನಡೆಸಿದ ಶ್ರಮಿಕ ಸಂಘದ ಕಾರ್ಮಿಕರು, ಕೇಂದ್ರದ ಕ್ರಮದ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಸರಕಾರ ಬಡವರನ್ನು ಅಣಕಿಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಕಪ್ಪು ಹಣವನ್ನು ವಾಪಾಸು ತರಲು ಹಲವು ರೀತಿಯ ಅಕೃತ ಮಾರ್ಗವಿದ್ದರೂ, ಇದೀಗ ನೋಟು ರದ್ಧತಿಯ ಅವ್ಯವಸ್ತಿತ ಕ್ರಮದಿಂದ ಶೇ. 70ರಷ್ಟು ಜನಸಾಮಾನ್ಯರು ಸಂಕಷ್ಟಕ್ಕೊಳಗಾಗಿದ್ದಾರೆ. ಕೂಲಿಯಾಳುಗಳಾಗಿ ದುಡಿಯುವ ಹಮಾಲಿಗಳು, ಕಾರ್ಮಿಕರು ಕಳೆದ ಸುಮಾರು ಮೂರು ವಾರಗಳಿಂದ ವೇತನವಿಲ್ಲದೆ ದಿನ ಕಳೆಯಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಇದರ ವಿರುದ್ಧ ಪ್ರತಿಭಟಿಸಿದವರಿಗೆ ದೇಶದ್ರೋಹಿಗಳೆಂದು ಬಣ್ಣಿಸುವ ಮೂಲಕ ಬಡವರನ್ನು ಬೀದಿ ಪಾಲು ಮಾಡುವ ಕಾರ್ಯವನ್ನು ಕೇಂದ್ರ ಸರಕಾರ ಮಾಡಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿಬಿ.ಕೆ. ಇಮ್ತಿಯಾಝ್, ವಿಲ್ಲಿ ವಿಲ್ಸನ್, ಸಂತೋಷ್ ಕುಮಾರ್ ಬಜಾಲ್ ಉಪಸ್ಥಿತರಿದ್ದರು.





