ರಿಸರ್ವ್ ಬ್ಯಾಂಕ್ ಗವರ್ನರ್ ಪಟೇಲ್ ವಿರುದ್ಧ ವಂಚನೆ, ಸಂಚಿನ ದೂರು ದಾಖಲು

ಜೈಪುರ, ನ.28: ರಾಜಸ್ಥಾನದ ಶಾಸಕರಾದ ವಿಶ್ವೇಂದ್ರ ಸಿಂಗ್ ಎಂಬವರಿಗೆ ಭರತಪುರದಲ್ಲಿ ಅವರು ಖಾತೆ ಹೊಂದಿರುವ ಬ್ಯಾಂಕ್ ಶಾಖೆಯೊಂದು ರೂ 10,000 ಕೊಡಲು ವಿಫಲವಾದ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಉರ್ಜಿತ್ ಪಟೇಲ್ ವಿರುದ್ಧ ದೂರು ದಾಖಲಿಸಿದ್ದಾರೆ.
ಕಳೆದ ಗುರುವಾರ ಸಿಂಗ್ ಅವರು ಭರತಪುರದ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಗೆ ತೆರಳಿ ತಮ್ಮ ಖಾತೆಯಿಂದ ರೂ.10,000 ಹಿಂಪಡೆಯಲು ಸರತಿಯಲ್ಲಿ ಸುಮಾರು ಒಂದು ಗಂಟೆ ನಿಂತಿದ್ದರು. ಆದರೆ ಬ್ಯಾಂಕಿನಲ್ಲಿ ಕೇವಲ ರೂ.3 ಲಕ್ಷ ನಗದು ಇರುವುದರಿಂದ ಅವರಿಗೆ ರೂ.2000 ಕ್ಕಿಂತ ಹೆಚ್ಚು ನಗದು ನೀಡಲು ಸಾಧ್ಯವಿಲ್ಲವೆಂದು ಬ್ಯಾಂಕ್ ಹೇಳಿತ್ತು.
ಇದರಿಂದ ಸಿಟ್ಟುಗೊಂಡ ಸಿಂಗ್ ಸಮೀಪದ ಪೊಲೀಸ್ ಠಾಣೆಗೆ ತೆರಳಿ ತನಗೆ ರಿಸರ್ವ್ ಬ್ಯಾಂಕ್ ಗವರ್ನರ್ ವಿರುದ್ಧ ವಂಚನೆ ಹಾಗು ಸಂಚಿನ ದೂರು ದಾಖಲಿಸಬೇಕೆಂದು ಹಾಗೂ ಆರ್ ಬಿಐ ಅಗತ್ಯ ಸಂಖ್ಯೆಯಲ್ಲಿ ಹೊಸ ಕರೆನ್ಸಿ ನೋಟುಗಳನ್ನು ಏಕೆ ಮುದ್ರಿಸಿಲ್ಲವೆಂದು ಪ್ರಶ್ನಿಸಬೇಕು ಎಂದು ಹೇಳಿದ್ದರು. ಸಾಕಷ್ಟು ಸಂಖ್ಯೆಯಲ್ಲಿ ನೋಟುಗಳನ್ನು ಮುದ್ರಿಸದ ಆರ್ ಬಿಐ ಗೆ ಶಿಕ್ಷೆ ನೀಡಬೇಕೆಂದು ಹೇಳಿದ ಅವರು ತಮ್ಮ ದೂರು ಸಲ್ಲಿಸಿದ್ದಾರೆ.
ಆದರೆ ಸಿಂಗ್ ಅವರ ದೂರಿನ ತನಿಖೆ ನಡೆಸಿದ ಮೇಲಷ್ಟೇ ಎಫ್ ಐಆರ್ ದಾಖಲಿಸಲು ಸಾಧ್ಯ ಎಂದು ಪೊಲೀಸರು ಹೇಳಿದ್ದಾರೆ.
ಕೇಂದ್ರದ ನೋಟು ಅಮಾನ್ಯ ನಿರ್ಧಾರವನ್ನು ರದ್ದುಗೊಳಿಸಬೇಕೆಂದು ಸುಪ್ರೀಂ ಕೋರ್ಟಿನ ಮುಂದೆ ಹಲವಾರು ಸಾರ್ವಜನಿಕ ಹಿತಾಸಕ್ತಿ ದಾವೆಗಳನ್ನು ದಾಖಲಿಸಲಾಗಿದೆಯಾದರೂ ಈ ನಿರ್ಧಾರವನ್ನು ರದ್ದುಪಡಿಸಲು ನಿರಾಕರಿಸಿರುವ ನ್ಯಾಯಾಲಯ ಅದೇ ಸಮಯ ಇದರಿಂದ ಜನರಿಗಾಗುತ್ತಿರುವ ಅನಾನುಕೂಲಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.







