"ಜನರು ಬ್ಯಾಂಕ್ ಲೂಟಿ ಮಾಡಲಿದ್ದಾರೆ" ಎಂದು ಶಿವಾಜಿ ವಂಶಸ್ಥ, ಸಂಸದ ಬೋಸ್ಲೆ
ಬೆಂಬಲಿಸಿದ ಶಿವಸೇನೆ

ಮುಂಬೈ, ನ.28: "ನೋಟುಗಳ ಅಮಾನ್ಯದಿಂದ ಉದ್ಭವಿಸಿರುವ ಆರಾಜಕ ಸ್ಥಿತಿ ಶೀಘ್ರ ಸುಧಾರಣೆ ಕಾಣದಿದ್ದರೆ ಜನರು ಬ್ಯಾಂಕ್ ಲೂಟಿ ಮಾಡಲಿದ್ದಾರೆ" ಎಂದು ಶಿವಾಜಿ ವಂಶಸ್ಥ, ಎನ್ ಸಿಪಿ ಸಂಸದ ಉದಯನ್ ರಾಜೇ ಬೋಸ್ಲೆ ನೀಡಿದ ಹೇಳಿಕೆಯನ್ನು ಶಿವಸೇನೆ ಬೆಂಬಲಿಸಿದೆ.
"ನೋಟು ರದ್ದತಿ ದೇಶದ ಜನರನ್ನು ಕೆರಳಿಸಿದೆ. ಬಡವರು ಹಾಗೂ ದುಡಿಯುವರ ಸ್ಥಿತಿ ಹದಗೆಟ್ಟಿದೆ" ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಪ್ರಕಟಿಸಿದ ಸಂಪಾದಕೀಯದಲ್ಲಿ ಹೇಳಿದೆ. ಛತ್ರಪತಿ ಶಿವಾಜಿ ವಂಶದಲ್ಲಿ 13ನೆಯರವಾದ ಬೋಸ್ಲೆ ಅವರು, "ಜನರ ಸಿಟ್ಟನ್ನು ನಾನು ಗಮನಕ್ಕೆ ತರುತ್ತಿದ್ದೇನೆ" ಎಂದು ಮೋದಿ ಸರಕಾರಕ್ಕೆ ಸವಾಲು ಹಾಕಿದ್ದರು.
2014ರ ಚುನಾವಣೆಯಲ್ಲಿ ಬಿಜೆಪಿ ಶಿವಾಜಿಯವರ ಆಶೀರ್ವಾದ ಇದೆ ಎಂದು ಹೇಳಿಕೊಂಡಿತ್ತು. ಇಂದು ಗ್ರಾಮೀಣ ಜನತೆಯ ಸ್ಥಿತಿ ಆಘಾತಕಾರಿಯಾಗಿದ್ದು, ಸಹಕಾರ ಸಂಘಗಳು ಹಾಗೂ ಗ್ರಾಮೀಣ ಬ್ಯಾಂಕುಗಳ ಮೇಲೆ ನಿರ್ಬಂಧ ಹೇರಿರುವುದು ಇದಕ್ಕೆ ಕಾರಣ. ಇದು ಗ್ರಾಮೀಣ ಆರ್ಥಿಕತೆಯ ಮರಣಶಾಸನ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರು ಬ್ಯಾಂಕುಗಳನ್ನು ಲೂಟಿ ಮಾಡಿದರೂ, ಅವರ ಕೈಗೆ ಏನೂ ಸಿಗದು ಎಂದು ಸಂಪಾದಕೀಯ ವಿವರಿಸಿದೆ.





