ಕೇರಳ ಸಂಪೂರ್ಣ ಬಂದ್

ತಿರುವನಂತಪುರಂ,ನ. 28: ನೋಟು ಅಮಾನ್ಯಗೊಳಿಸಿರುವುದು ಮತ್ತು ಸಹಕಾರಿ ವಿಷಯದಲ್ಲಿ ಎಡಪಕ್ಷ ಮೈತ್ರಿರಂಗ ಕರೆನೀಡಿದ ಹರತಾಳ ಕೇರಳಾದ್ಯಂತ ಜನಜೀವನವನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಹರತಾಳದಿಂದಾಗಿ ರೈಲ್ವೆ ಸ್ಟೇಶನ್ ಬಸ್ ಸ್ಟಾಂಡ್‌ಗಳಿಗೆ ಬಂದಿಳಿದ ಪ್ರಯಾಣಿಕರು ಪ್ರಯಾಣ ಮುಂದುವರಿಸಲು ವಾಹನ ದೊರಕದೆ ಕಷ್ಟಕ್ಕೀಡಾಗಿದ್ದಾರೆ. ವ್ಯಾಪಾರಿ ಸಂಸ್ಥೆಗಳು,ಹೊಟೇಲುಗಳು ತೆರೆದಿಲ್ಲ. ಮಧ್ಯಕೇರಳದಲ್ಲಿ ಮತ್ತು ಉತ್ತರ ಕೇರಳದಲ್ಲಿ ಹರತಾಳ ಹೆಚ್ಚು ಯಶಸ್ವಿಯಾಗಿದೆ. ರಾಜ್ಯಾದ್ಯಂತ ಕೆಎಸ್ಸಾರ್ಟಿಸಿ ಬಸ್ ಸೇವೆ ಸಂಪೂರ್ಣ ಸ್ಥಗಿತಗೊಂಡಿರುವ ಸ್ಥಿತಿಯಲ್ಲಿದೆ. ಖಾಸಗಿ ಬಸ್‌ಗಳು ಕೂಡಾ ಓಡಾಟಕ್ಕಿಳಿದಿಲ್ಲ. ಕೆಲವೇ ಕೆಲವು ಸ್ಥಳಗಳನ್ನು ಬಿಟ್ಟರೆ ಇತರೆಲ್ಲಡೆ ಸಾರ್ವಜನಿಕ ಸಂಚಾರ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ.
ಅದೇ ವೇಳೆ ವಯನಾಡ್‌ನ ಕಲ್ಪಟ್ಟ ಹೊರತಾಗಿ ಕೇರಳದಾದ್ಯಂತ ಬೇರೆಲ್ಲಿಯೂ ವಾಹನಗಳನ್ನು ತಡೆಯುವ ವರದಿಗಳು ಬಂದಿಲ್ಲ. ಪತ್ತನತಿಟ್ಟಂನಲ್ಲಿ ಶಬರಿಮಲೆಗೆ ಕೆಎಸ್ಸಾರ್ಟಿಸಿ ಬಸ್ ಸರ್ವೀಸ್ ನಡೆಸುತ್ತಿದೆ. ತಿರುವನಂತಪುರಂನಿಂದ ಪಂಪೆಗೆ ಕೆಎಸ್ಸಾರ್ಟಿಸಿ ಸರ್ವೀಸ್ ನಡೆಸುತ್ತಿದೆ. ಶಬರಿಮಲೆ ತೀರ್ಥಯಾತ್ರಿಗಳನ್ನು ಗಮನದಲ್ಲಿರಿಸಿ ಆ ಭಾಗದ ಹಳ್ಳಿಗಳನ್ನು ಹರತಾಳದಿಂದ ಕೈಬಿಡಲಾಗಿದೆ. ಆದ್ದರಿಂದ ಪತ್ತನಂತಿಟ್ಟಂ ಜಿಲ್ಲೆಯ ರಾನ್ನಿ ತಾಲೂಕು, ಚಿಟ್ಟೂರ್, ಸೀತತ್ತೋಡ್ ಪಂಚಾಯತ್‌ಗಳು, ಕೋಟ್ಟಯಂ ಜಿಲ್ಲೆಯ ಎರುಮೇಲಿ ಪಂಚಾಯತ್. ಆಲಪ್ಪುಝದ ಚೆಂಙನ್ನೂರ್ ನಗರ ಇಲ್ಲೆಲ್ಲ ಶಬರಿ ಮಲೆಗೆ ಹೋಗುವದಾರಿಯಲ್ಲಿ ಹರತಾಳ ಆಚರಿಸಲಾಗುತ್ತಿಲ್ಲ. ಆದ್ದರಿಂದ ಶಬರಿ ಮಲೆ ಯಾತ್ರಿಗಳು ತಮ್ಮ ಯಾತ್ರೆಯನ್ನು ನಿರಾತಂಕವಾಗಿ ಮುಂದುವರಿಸಿದ್ದಾರೆ.
ಎರ್ನಾಕುಲಂ ಜಿಲ್ಲೆಯ ತೃಪ್ಪಣಿತ್ತುರಿ, ಮಂಞಪ್ಪ್ರ, ಚೊಟ್ಟಾನಿ ಎಂಬ ಪ್ರದೇಶಗಳಲ್ಲಿ ಹರತಾಳ ಇಲ್ಲ. ಪೂಣತ್ರಯೀಶ ದೇವಳದಲ್ಲಿ ಕಾರ್ಯಕ್ರಮವಿರುವುದು ಇದಕ್ಕೆ ಕಾರಣವಾಗಿದೆ. ಇಡುಕ್ಕಿ, ಎರ್ನಾಕುಲಂ ಜಿಲ್ಲೆಯ ಪ್ರವಾಸಿ ತಾಣಕ್ಕೆ ಹರತಾಳದಿಂದ ಅಡ್ಡಿಯಾಗಿದೆ. ಎರ್ನಾಕುಳಂ ಐಟಿ ಕ್ಷೇತ್ರ ಬಂದ್‌ನಿಂದ ಸಮಸ್ಯೆಗೀಡಾಯಿತು. ಕೊಚ್ಚಿನಲ್ಲಿ ಪ್ಯಾಕ್ಟರಿಗಳು ಮುಚ್ಚಿಕೊಂಡಿವೆ.
ಕೇರಳದಾದ್ಯಂತ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಕಣ್ಣೂರ್, ಕಾಸರಗೋಡು ಜಿಲ್ಲೆಯನ್ನು ಬಿಟ್ಟರೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹರತಾಳದಿಂದ ಯಾವುದೇಅಡ್ಡಿಯಾಗಿಲ್ಲ.
ಕೇರಳದ ಉತ್ತರ ಭಾಗದ ಜಿಲ್ಲೆಗಳಲ್ಲಿ ಸರಕಾರಿ ಕಚೇರಿಯಲ್ಲಿ ಹಾಜರಾತಿ ಕಡಿಮೆ ಇತ್ತು. ಅಡಳಿತ ಪಕ್ಷವೇ ನಡೆಸುತ್ತಿರುವ ಹರತಾಳವಾದ್ದರಿಂದ ಕೆಲವು ಕಡೆ ಸರಕಾರಿ ಕಚೇರಿಗಳು ಬಿಕೊ ಎನ್ನುತ್ತಿದ್ದವು. ಅದೇವೇಳೆ ವಯನಾಡ್ ನಾಟುಕಣಿಚ್ಚೂರದಲ್ಲಿ ಹೊರರಾಜ್ಯಗಳಿಂದ ಬರುತ್ತಿದ್ದ ಸರಕುಸಾಗಾಟದ ವಾಹನಗಳನ್ನು ತಡೆಹಿಡಿಯಲಾಗಿದೆ. ಬ್ಯಾಂಕ್‌ಗಳು ಎಟಿಎಂಗಳ ಮುಂದೆ ಅನೇಕ ಮಂದಿ ಸರತಿ ನಿಂತಿದ್ದಾರೆ. ದ್ವಿಚಕ್ರವಾಹನಗಳು, ಖಾಸಗಿ ವಾಹನಗಳು ಮಾತ್ರವೇ ಸಂಚಾರ ನಡೆಸುತ್ತಿವೆ. ದಕ್ಷಿಣ ಜಿಲ್ಲೆಗಳಲ್ಲಿ ಹರತಾಳ ಅಂಶಿಕವಾಗಿ ನಡೆದಿದೆ. ಅದೇ ವೇಳೆ ಇಂದು ಸಾಮಾನ್ಯರೀತಿಯಂತೆ ಬಸ್ ಒಡಾಟ ನಡೆಸಬೇಕೆಂದು ಕೆಎಸ್ಸಾರ್ಟಿಸಿ ಮ್ಯಾನೆಜಿಂಗ್ ಡೈರೆಕ್ಟರ್ ತಿಳಿಸಿದ್ದರು. ಕಾನೂನು ಶಿಸ್ತು ಸಮಸ್ಯೆ ಎದುರಾದರೆ ಪೊಲೀಸರ ಸಹಾಯ ಯಾಚಿಸಬೇಕೆಂದು ಎಂಡಿ ಎಂಜಿ ರಾಜಮಾಣಿಕ್ಯಂ ಸೂಚಿಸಿದ್ದರು. ಆದರೆ ಎಂಡಿಯ ನಿರ್ದೇಶ ಅಂಶಿಕವಾಗಿ ಮಾತ್ರ ಜಾರಿಗೆ ಬಂದಿವೆ. ಪೊಲೀಸ್ ಬೆಂಗಾವಲಿನೊಂದಿಗೆ ಕೆಲವು ಬಸ್‌ಗಳಷ್ಟೇ ರಸ್ತೆಯಲ್ಲಿ ಓಡಾಟ ನಡೆಸಿವೆಎಂದು ಪ್ರಾಥಮಿಕ ಮಾಹಿತಿಗಳು ದೊರಕಿವೆ.







