ಮೋದಿ ಪದಚ್ಯುತಿವರೆಗೆ ಅರ್ಧ ತಲೆ ಬೋಳು ಇಡಲಿರುವ ಟೀ ಮಾರಾಟಗಾರ
ನೋಟು ರದ್ದತಿ ವಿರುದ್ಧ ವಿನೂತನ ಪ್ರತಿಭಟನೆ

ತಿರುವನಂತಪುರಂ,ನ.28 :ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದಂದಿನಿಂದ ಜನಸಾಮಾನ್ಯ ಕಂಗೆಟ್ಟು ಹೋಗಿದ್ದಾನೆ.ಬಡವರು, ದಿನಗೂಲಿ ಕಾರ್ಮಿಕರು ಕೈಯ್ಯಲ್ಲಿ ಹಣವಿಲ್ಲದೆ ಕಂಗಾಲಾಗಿ ಹೋಗಿದ್ದಾರೆ. ಇಂತಹ ಒಂದು ಸಂದರ್ಭದಲ್ಲಿ ಕೇರಳ ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರೊಫೆಸರ್ ಆಗಿರುವ ಡಾ. ಅಶ್ರಫ್ ಕಡಕ್ಕಲ್ ಎಂಬವರು ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಕೊಲ್ಲಂ ನಗರದ ಟೀ ಮಾರಾಟಗಾರನೊಬ್ಬ ನೋಟು ರದ್ದತಿ ವಿರೋಧಿಸಿ ತನ್ನ ಅರ್ಧ ತಲೆ ಬೋಳಿಸಿರುವ ಬಗ್ಗೆ ಹಾಗೂಪ್ರಧಾನಿಪದಚ್ಯುತಗೊಳ್ಳುವ ತನಕ ತನ್ನ ಕೂದಲು ಬೆಳೆಸಿಕೊಳ್ಳುವುದಿಲ್ಲವೆಂದು ಶಪಥ ಮಾಡಿರುವ ಬಗ್ಗೆ ಬರೆದಿದ್ದಾರೆ.
70 ವರ್ಷದ ಯಹ್ಯಾ , ಕೊಲ್ಲಂನಲ್ಲೊಂದು ಸಣ್ಣ ಹೋಟೆಲ್ ಹಾಗೂ ಟೀ ಸ್ಟಾಲ್ ನಡೆಸುತ್ತಿದ್ದಾರೆ. ಅವರ ಗ್ರಾಹಕರು ಅವರನ್ನು ಪ್ರೀತಿಯಿಂದ ಯಹಿಕ್ಕಕ್ಕ ಎಂದು ಕರೆಯುತ್ತಾರೆ. ಸರಕಾರದ ನೋಟು ಅಮಾನ್ಯದಿಂದ ತೊಂದರೆಗೊಳಗಾಗಿ ತನ್ನ ಅರ್ಧ ತಳೆ ಬೋಳಿಸಿರುವ ಬಗ್ಗೆ ಬರೆಯಲಾಧ ತಮ್ಮ ಫೇಸ್ ಬುಕ್ ಪೋಸ್ಟಿಗೆ ಅಶ್ರಫ್ ಅವರು ‘‘ಮಾಜಿ ಟೀ ಮಾರಾಟಗಾರನೊಬ್ಬನಿಗೆ ಸಣ್ಣ ಹೋಟೆಲ್ ಮಾಲಿಕನೊಬ್ಬನ ಮನ್ ಕಿ ಬಾತ್’ ಎಂಬ ಶೀರ್ಷಿಕೆ ನೀಡಿದ್ದಾರೆ.ಈ ಪೋಸ್ಟ್ ನಲ್ಲಿ ಅಶ್ರಫ್ ಅವರು ಯಹ್ಯಾ ಮಾತುಗಳನ್ನು ದಾಖಲಿಸಿದ್ದಾರೆ. ಅದರಲ್ಲಿ ಹೀಗೆಂದು ಬರೆಯಲಾಗಿದೆ.
‘‘ನನ್ನ ಹೆಸರು ಯಹ್ಯಾ, ನನ್ನನ್ನು ಕೆಲವರು ಯಹಿ ಎಂದು ಮತ್ತೆ ಕೆಲವರು "ಯಹಿಕ್ಕಕ್ಕ" ಎಂದು ಕರೆಯುತ್ತಾರೆ. ಕೊಲ್ಲಂ ಜಿಲ್ಲೆಯ ಕಡಕ್ಕಲ್ ಮುಕ್ಕುನ್ನುಂ ನಿವಾಸಿಯಾಗಿರುವ ನನಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ನನ್ನ ಪುತ್ರಿಯ ವಿವಾಹಕ್ಕೆ ತೆಂಗಿನ ಮರ ಏರಿ, ಗದ್ದೆಗಳಲ್ಲಿ ದುಡಿದು ಹಣ ಸಂಪಾದಿಸಲು ಸಾಧ್ಯವಿಲ್ಲವೆಂದು ತಿಳಿದ ನಂತರ ನಾನು ಗಲ್ಫ್ ರಾಷ್ಟ್ರಕ್ಕೆ ಹೋದೆ. ಆದರೆ ಬಡವ ಹಾಗೂ ಅನಕ್ಷರಸ್ಥನಾದ ನನಗೆ ಅಲ್ಲಿ ಹೆಚ್ಚು ಕಷ್ಟವಿತ್ತು. ಸಂಪಾದಿಸಿದ ಹಣದೊಂದಿಗೆ ಮರಳಿ ಬಂದ ನಾನು ಬ್ಯಾಂಕ್ ಸಾಲ ಪಡೆದು ಮಗಳ ಮದುವೆ ಮಾಡಿದೆ. ನನ್ನ ಹೊಟೇಲಿನ ಎಲ್ಲಾ ಕೆಲಸ ನಾನೇ ಮಾಡುತ್ತೇನೆ ಅದಕ್ಕಾಗಿ ನಾನು ನೈಟಿ ಧರಿಸುತ್ತೇನೆ.

ಹೊಟೇಲಿನಲ್ಲಿ ನಾನು ತಯಾರಿಸುವ ಚಿಕನ್ ಹಾಗೂ ಬೀಫ್ ಪದಾರ್ಥ ಗ್ರಾಹಕರಿಗೆ ಇಷ್ಟ.ಇಂತಹ ಹೋಟೆಲನ್ನು ಗುಜರಾತ್ ಅಥವಾ ಮಧ್ಯ ಪ್ರದೇಶದಲ್ಲಿ ನಡೆಸಿದ್ದರೆ ನನ್ನನ್ನು ಗಲ್ಲಿಗೇರಿಸುತ್ತಿದ್ದರು. ಆದರೆ ಪ್ರಧಾನಿ ನೋಟು ಅಮಾನ್ಯಗೊಳಿಸಿದಂದಿನಿಂದ ನನಗೆ ಕಷ್ಟಗಳು ಜಾಸ್ತಿಯಾಗಿವೆ. ನನ್ನಲ್ಲಿ ಅಮಾನ್ಯಗೊಂಡ 23,000 ನಗದು ಇತ್ತು. ಅದನ್ನು ವಿನಿಮಯ ಮಾಡಲು ಎರಡು ದಿನ ಸರತಿ ಸಾಲಿನಲ್ಲಿ ನಿಂತೆ. ಎರಡನೇ ದಿನ ನನ್ನ ರಕ್ತದಲ್ಲಿನ ಸಕ್ಕರೆಯಂಶ ಕಡಿಮೆಯಾಗಿ ನಾನು ಹೆಚ್ಚು ಕಡಿಮೆ ಕುಸಿದು ಬಿದ್ದೆ. ಕೆಲವು ಒಳ್ಳೆಯ ಜನರು ನನ್ನನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿದರು. ಸಹಕಾರಿ ಬ್ಯಾಂಕ್ ಒಂದರಲ್ಲಿರುವ ನನ್ನ ಸಾಲದ ಖಾತೆ ಹೊರತುಪಡಿಸಿ ನನ್ನಲ್ಲಿ ಬೇರೆ ಬ್ಯಾಂಕ್ ಖಾತೆಯಿಲ್ಲ. ಆದರೆ ಸಹಕಾರಿ ಬ್ಯಾಂಕುಗಳು ಹಣ ನೀಡುತ್ತಿಲ್ಲವಾದ ಕಾರಣ ನಾನು ನನ್ನಲ್ಲಿರುವ ಅಮಾನ್ಯ ನೋಟುಗಳನ್ನು ಎಲ್ಲೂ ಠೇವಣಿಯಿರಿಸುವ ಹಾಗಿಲ್ಲ. ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ ನಂತರ ನಾನು ಒಲೆ ಹೊತ್ತಿಸಿ ನನ್ನಲ್ಲಿದ್ದ ರೂ 23,000 ಹಣವನ್ನು ಸುಟ್ಟು ಬಿಟ್ಟೆ. ನಂತರ ಹತ್ತಿರದ ಕ್ಷೌರಿಕನಂಗಡಿಗೆ ಹೋಗಿ ನನ್ನ ತಲೆಯನ್ನು ಅರ್ಧ ಬೋಳಿಸಿದೆ. ಪ್ರಧಾನಿ ಮೋದೀಜಿಯವರು ಪದಚ್ಯುತಗೊಂಡ ನಂತರವಷ್ಟೇ ನಾನು ಮತ್ತೆ ಕೂದಲು ಬೆಳೆಸುತ್ತೇನೆ.’’
‘‘ನಿಮ್ಮ ಪ್ರತಿಭಟನೆವಿಪಕ್ಷಗಳು ನಡೆಸಬೇಕೆಂದಿರುವ ಪ್ರತಿಭಟನೆಗಿಂತ ಬಹಳಷ್ಟು ಶಕ್ತಿಶಾಲಿ’’ ಎಂದು ಪೋಸ್ಟ್ ಅಂತ್ಯಕ್ಕೆ ಡಾ. ಅಶ್ರಫ್ ಬರೆದಿದ್ದಾರೆ.








