ಮುಂದಿನ ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿ ಕಪ್ಪು ಪಟ್ಟಿಗೆ: ಎಂ. ಕೂಸಪ್ಪ
ಎಸ್ ಡಿಪಿಐಯಿಂದ `ಆಕ್ರೋಶ್ ದಿವಸ್'

ಪುತ್ತೂರು, ನ.28 : ಕಪ್ಪು ಹಣ ವಿಚಾರದಲ್ಲಿ ಬಡವರಿಗೆ ತೊಂದರೆ ನೀಡಿರುವ ಬಿಜೆಪಿ ಹಾಗೂ ಪ್ರಧಾನಿ ಮೋದಿಯವರನ್ನು ದೇಶದ ಜನತೆ ಮುಂದಿನ ಚುನಾವಣೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸಲಿದ್ದಾರೆ ಎಂದು ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಎಂ.ಕೂಸಪ್ಪ ಹೇಳಿದರು.
ಅವರು ನೋಟು ರದ್ದತಿಗೊಳಿಸಿದ ಮೋದಿ ಸರಕಾರದ ವಿರುದ್ದ ಸೋಮವಾರ ಪುತ್ತೂರು ಮಿನಿ ವಿಧಾನ ಸೌಧದ ಮುಂಭಾಗದಲ್ಲಿ ಎಸ್ ಡಿಪಿಐ ವತಿಯಿಂದ ನಡೆದ `ಆಕ್ರೋಶ್ ದಿವಸ್' ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು. ನೋಟು ನಿಷೇಧ ವಿಚಾರದಲ್ಲಿ ಕೇವಲ 5 ಲಕ್ಷ ಮಂದಿಯನ್ನು ಸಮೀಕ್ಷೆ ಮಾಡಿ ತಮಗೆ ಬೆಂಬಲ ಘೋಷಿಸಿದ್ದಾರೆ ಎನ್ನುತ್ತಿರುವ ಪ್ರಧಾನಿ ಅವರು ಉಳಿದ 27 ಕೋಟಿ ಜನರನ್ನು ಭಾರತೀಯರು ಅಲ್ಲ ಎಂದು ಭಾವಿಸಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. ಬಡವರನ್ನು ಮೂರ್ಖರನ್ನಾಗಿಸಿ ಬ್ಯಾಂಕ್ ಬಾಗಿಲಿನಲ್ಲಿ ನಿಲ್ಲಿಸುವ ಮೊದಲು ನಿಜವಾದ ಕಪ್ಪು ಹಣವಂತರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೆ.ಎ ಸಿದ್ದಿಕ್ ಮಾತನಾಡಿ ನೋಟು ನಿಷೇಧದಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಕುಸಿತಗೊಂಡಿದ್ದು, ಬಡವರು ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳು ಕೆಲಸವಿಲ್ಲದೆ ಕಣ್ಣೀರು ಹಾಕುವ ಸ್ಥಿತಿ ಬಂದಿದ್ದು, ಶ್ರೀಮಂತರಿಗೆ ಅನುಕೂಲಕರವಾಗಿದೆ. ಶ್ರೀಮಂತರು ಕಪ್ಪು ಹಣವನ್ನು ನಗದು ರೂಪದಲ್ಲಿಡದೆ ಇತರ ರೂಪದಲ್ಲಿ ದಾಸ್ತಾನು ಮಾಡಿದ್ದಾರೆ. ಹಾಗಾಗಿ ನೋಟು ನಿಷೇಧದಿಂದ ಅವರ ಕಪ್ಪು ಹಣ ಹೊರಕ್ಕೆ ಬರುವುದೂ ಇಲ್ಲ, ಬಡ ಹಾಗೂ ಸಾಮಾನ್ಯ ವರ್ಗದ ಜನತೆಗೆ ಮಾತ್ರ ತೊಂದರೆಯಾಗಿದೆ ಎಂದ ಅವರು ಕೋಟ್ಯಾಂತರ ಕಪ್ಪು ಹಣ ಹೂಡಿಟ್ಟಿರುವ ಬಿಜೆಪಿ ಮುಖಂಡರ ಮನೆಗೆ ಮೊದಲು ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡುತ್ತಿದ್ದರೆ ಅದೆಷ್ಟೋ ಕಪ್ಪು ಹಣ ಮೊದಲೇ ಹೊರಬರುತ್ತಿತ್ತು ಎಂದು ಆರೋಪಿಸಿದರು.
ಸಭೆಯಲ್ಲಿ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯ ಜಾಬಿರ್ ಅರಿಯಡ್ಕ, ಪ್ರಮುಖರಾದ ಇಬ್ರಾಹಿಂ ಸಾಗರ್, ಮುಸ್ತಫಾ , ಅಝೀಝ್ ನಿನ್ನಿಕಲ್, ಪಿಬಿಕೆ ಮುಹಮ್ಮದ್, ಅಝೀಝ್ ಕಬಕ, ಖಾದರ್ ಬಪ್ಪಳಿಗೆ, ಹಂಝ ಅಫ್ನಾನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನೆಯ ಬಳಿಕ ಸಹಾಯಕ ಆಯುಕ್ತರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.







