ಉಡುಪಿ ಕಾಂಗ್ರೆಸ್ ನಿಂದ ಆಕ್ರೋಶ್ ದಿವಸ್, ರಸ್ತೆ ತಡೆ

ಉಡುಪಿ, ನ.28: ಕೇಂದ್ರ ಸರಕಾರದ ನೋಟು ರದ್ಧತಿಯ ಕ್ರಮದಿಂದ ಜನಸಾಮಾನ್ಯರ ಮೇಲೆ ಆಗುತ್ತಿರುವ ತೊಂದರೆಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಸೋಮವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಆಕ್ರೋಶ್ ದಿವಸ್ ಪ್ರತಿಭಟನೆ ಹಾಗೂ ರಸ್ತೆ ತಡೆಯನ್ನು ನಡೆಸಿತು.
ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಉದ್ಯಾವರ ನಾಗೇಶ್ ಕುಮಾರ್, ಬಿಜೆಪಿ ಭಕ್ತರು ನರೇಂದ್ರ ಮೋದಿ ಏನು ಹೇಳಿದರೂ ನಂಬುವಂತಹ ಮನಸ್ಥಿತಿಯಲ್ಲಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ ಮೋದಿ ಭಕ್ತರು ನೋಟು ರದ್ಧತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಅವರ ತಂದೆ ತಾಯಿ ಹಣ ಪಡೆಯುವುದಕ್ಕಾಗಿ ಬ್ಯಾಂಕಿನಲ್ಲಿ ಗಂಟೆ ಗಟ್ಟಲೆ ನಿಂತು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದರು.
ನೋಟು ರದ್ಧತಿಯ ಪರಿಣಾಮ ದೇಶದಲ್ಲಿ 70 ಜನ ತಮ್ಮ ಜೀವ ಕಳೆದುಕೊಂಡರು. ಇದೀಗ ಬಿಜೆಪಿಯವರು ಇಂದು ಸಂಭ್ರಮ ದಿನಾಚರಣೆ ಮಾಡುತ್ತಿದ್ದಾರೆ. ಸಾವಿನಲ್ಲೂ ಸಂಭ್ರಮಾಚರಣೆಯ ಮಾಡುವ ಮನಸ್ಥಿತಿ ಇವರದ್ದಾಗಿದೆ. ಇದು ನಮ್ಮ ದುರಂತ ಎಂದು ಅವರು ಆರೋಪಿಸಿದರು.
ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆ ಬೈಲು ಮಾತನಾಡಿ, ಜನರನ್ನು ಎಟಿಎಂ ಎದುರು ನಿಲ್ಲಿಸುವುದು ಸ್ವಾಭಿಮಾನ ಅಲ್ಲ. ಅವರಿಗೆ ಬೇಕಾದ ಹಕ್ಕುಪತ್ರ, ಮನೆ, ಜಾಗ ನೀಡುವುದು ಸ್ವಾಭಿಮಾನವಾಗಿದೆ. ಆ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ನೋಟು ರದ್ಧತಿಯನ್ನು ಈ ವರೆಗೆ ಸರಿಪಡಿಸಲು ಆಗಿಲ್ಲ. ಇನ್ನು ವರ್ಷ ಕಳೆದರೂ ಇದೇ ರೀತಿಯ ಪರಿಸ್ಥಿತಿ ಇರುತ್ತದೆ. ಜಗತ್ತಿನ ಎಲ್ಲಾ ಕಡೆ ಖೋಟ ನೋಟುಗಳಿವೆ. ಆದರೆ ಹೊಸ ನೋಟು ಮುದ್ರಣ ಆದ 24 ಗಂಟೆಗಳಲ್ಲಿ ಖೋಟ ನೋಟು ಮುದ್ರಣವಾಗುತ್ತಿರುವುದು ಭಾರತದಲ್ಲಿ ಮಾತ್ರ ಎಂದು ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ ಮಾತನಾಡಿ, ಮೋದಿ ಸರಕಾರ ಇಡೀ ದೇಶವನ್ನು ಅದಾನಿ, ಅಂಬಾನಿಯವರಿಗೆ ಮಾರಾಟ ಮಾಡಲು ಯೋಜನೆ ಹಾಕಿಕೊಳ್ಳುತ್ತಿದೆ. ಇವರಿಗೆ ಜನಸಾಮಾನ್ಯರ ಕಷ್ಟ ಅರ್ಥವಾಗುತ್ತಿಲ್ಲ. ನೋಟು ರದ್ಧತಿಯ ಪರಿಣಾಮ ಲಕ್ಷಾಂತರ ಉದ್ಯೋಗಗಳಿಗೆ ಕತ್ತರಿ ಬಿದ್ದಿದೆ. ನಿರುದ್ಯೋಗ ಸಮಸ್ಯೆ ಇನ್ನಷ್ಟು ಉಲ್ಬಣವಾಗಲಿದೆ ಎಂದರು.
ಬಳಿಕ ಪ್ರತಿಭಟನಕಾರರು ಕ್ಲಾಕ್ ಟವರ್ ಎದುರಿನ ರಸ್ತೆಯಲ್ಲಿ ಕುಳಿತು 10 ನಿಮಿಷಗಳ ಕಾಲ ರಸ್ತೆ ತಡೆ ನಡೆಸಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯಲ್ಲಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ಮುಖಂಡರಾದ ಜನಾರ್ದನ ತೋನ್ಸೆ, ಅಮೃತ್ ಶೆಣೈ, ವರೋನಿಕಾ ಕರ್ನೆಲಿಯೋ, ಡಾ.ಸುನೀತಾ ಶೆಟ್ಟಿ, ರಮೇಶ್ ಕಾಂಚನ್, ನರಸಿಂಹಮೂರ್ತಿ, ಜನಾರ್ದನ ಭಂಡಾರ್ಕರ್, ಶಬ್ಬೀರ್ ಅಹ್ಮದ್, ಅಝೀರೆ್ ಹೆಜಮಾಡಿ, ಹಬೀಬ್ ಅಲಿ, ಶಶಿಧರ್ ಶೆಟ್ಟಿ ಎರ್ಮಾಳ್ ಮೊದಲಾದವರು ಉಪಸ್ಥಿತರಿದ್ದರು.







