ನೋಟು ರದ್ದು ಖಂಡಿಸಿ ಸುಳ್ಯದಲ್ಲಿ ಕಾಂಗ್ರೆಸ್, ಎಸ್‌ಡಿಪಿಐ ಪ್ರತಿಭಟನೆ

ಸುಳ್ಯ, ನ.28: ನೋಟು ರದ್ದು ಕ್ರಮವನ್ನು ಖಂಡಿಸಿ ವಿರೋಧ ಪಕ್ಷಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಸುಳ್ಯದಲ್ಲೂ ಪೂರಕ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ನೇತೃತ್ವದಲ್ಲಿ ಬಸ್ ನಿಲ್ದಾಣದ ಬಳಿ ಪ್ರತಿಭಟನಾ ಸಭೆ ನಡೆಯಿತು.
ಈ ಸಂದರ್ಭ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವೆಂಕಪ್ಪಗೌಡ, ಮೋದಿಯವರ ಕ್ರಮದಿಂದ ಬಡ ಜನತೆ ನಿತ್ಯ ಬ್ಯಾಂಕಿಗೆ ಅಲೆಯುವಂತಾಗಿದೆ. ದೇಶದಲ್ಲಿ 65 ಜನರು ಕುಸಿದು ಬಿದ್ದು ಸತ್ತಿದ್ದಾರೆ. ಇದಕ್ಕಾಗಿ ಬಿಜೆಪಿ ಇಂದು ಸಂಭ್ರಮಾಚರಣೆ ನಡೆಸುತ್ತಿದೆ ಎಂದು ಟೀಕಿಸಿದರು.
ಪ್ರಧಾನಿ ಮೋದಿಯವರು ನಮ್ಮ ತೆರಿಗೆ ಹಣದಿಂದ ಈಗಾಗಲೇ 50 ರಾಷ್ಟ್ರಗಳನ್ನು ಸುತ್ತಿದ್ದಾರೆ. ಕಳೆದ 7 ದಿನಗಳಿಂದ ಸಂಸತ್ ಅಧಿವೇಶನ ನಡೆಯುತಿದ್ದರೂ ಅದರಲ್ಲಿ ಭಾಗವಹಿಸಲು ಅವರಿಗೆ ಪುರುಸೊತ್ತು ಸಿಕ್ಕಿಲ್ಲ. ಸಿದ್ದರಾಮಯ್ಯ ಅಕ್ಕಿ ನೀಡಿದ್ದರಿಂದ ಬಡವರು ಬದುಕಿದ್ದಾರೆ ಎಂದರು.
ಎಸ್‌ಡಿಪಿಐ ಮುಖಂಡ ಕೆ.ಎಸ್.ಉಮ್ಮರ್ ಮಾತನಾಡಿ, ಸಂಸತ್ತಿಗೆ ಬಂದು ಭಾಷಣ ಮಾಡಲು 56 ಇಂಚು ಎದೆ ಇರುವ ಮೋದಿಗೆ ತಾಕತ್ತಿಲ್ಲ. ಬಿಜೆಪಿಯವರು ಇಂದು ಆಚರಿಸುತ್ತಿರುವ ವಿಜಯೋತ್ಸವ ಅವರ ಕೊನೆಯ ವಿಜಯೋತ್ಸವವಾಗಲಿದೆ. ಸುಳ್ಳನ್ನು ಸತ್ಯ ಮಾಡಿಕೊಂಡು ಹೋಗುವ ಬಿಜೆಪಿಯವರಿಗೆ ಮುಂದಿನ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ವಿರೋಧ ಪಕ್ಷಗಳು ಒಗ್ಗಟ್ಟಾಗಿ ಮೋದಿಯವರನ್ನು ದೇಶದಿಂದ ಹೊರಕ್ಕೆ ಹಾಕಲಿದ್ದಾರೆ ಎಂದರು.
ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆ ಮಾತನಾಡಿ, ಅಧಿಕಾರ ಇದೆ ಎಂದು ಬಡವರ ಮೇಲೆ ಸವಾರಿ ಮಾಡುತ್ತಿದ್ದಾರೆ. ಅವರ ಅಧಿಕಾರ ಇಲ್ಲಿಗೆ ಕೊನೆಗೊಳ್ಳಲಿದೆ ಎಂದರು.
ಕೆಪಿಸಿಸಿ ಸದಸ್ಯ ಡಾ.ರಘು, ಕೇಂದ್ರ ನಾರು ಮಂಡಳಿ ಮಾಜಿ ಸದಸ್ಯ ಟಿ.ಎಂ.ಶಹೀದ್ ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಬೀರಾ ಮೊಯ್ದಿನ್, ಎಸ್.ಸಂಶುದ್ದೀನ್, ಪಿ.ಎ.ಮುಹಮ್ಮದ್ ವೇದಿಕೆಯಲ್ಲಿದ್ದರು. ಪಿ.ಎಸ್.ಗಂಗಾಧರ್. ಕೆ.ಎಂ.ಮುಸ್ತಫಾ, ದಿನೇಶ್ ಅಂಬೆಕಲ್ಲು, ಅಬ್ದುಲ್ ಗಫೂರ್, ಅಶೋಕ್ ನೆಕ್ರಾಜೆ, ಪ್ರೇಮಾ ಟೀಚರ್, ಸುಜಯಕೃಷ್ಣ, ಧರ್ಮಪಾಲ ಕೊಯಿಂಗಾಜೆ, ಶಶಿಕಲಾ ನೀರಬಿದಿರೆ, ಜೂಲಿಯಾನ ಮೊದಲಾದವರಿದ್ದರು.
ಆಕ್ರೋಶ್ ದಿವಸ್ ಪ್ರತಿಭಟನೆಗೂ ಮುನ್ನ ನಗರದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಮುಖಂಡರು, ಕಾರ್ಯಕರ್ತರು ತಮ್ಮ ಪಕ್ಷದ ಧ್ವಜದೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಆಕ್ರೋಶ್ ದಿವಸ್‌ಗೆ ಸುಳ್ಯದಲ್ಲಿ ಪೂರಕ ಪ್ರತಿಕ್ರಿಯೆ ಲಭಿಸಿದ್ದರೂ ಯಾವುದೇ ಬಂದ್ ನಡೆಯಲಿಲ್ಲ.
ಪ್ರತಿಭಟನೆ ಸಂದರ್ಭ 1 ಗಂಟೆಗಳ ಕಾಲ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ನೀಡಬೇಕೆಂದು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮನವಿ ಮಾಡಲಾಗಿತ್ತು. ಆದರೆ ಎಲ್ಲಾ ಅಂಗಡಿಗಳು ಎಂದಿನಂತೆ ವ್ಯವಹಾರ ನಡೆಸಿದವು. ವಾಹನ ಸಂಚಾರವೂ ಎಂದಿನಂತಿತ್ತು. ಶಾಲಾ-ಕಾಲೇಜುಗಳು, ಸರಕಾರಿ ಕಚೇರಿಗಳು, ಬ್ಯಾಂಕ್, ಸಹಕಾರಿ ಸಂಘಗಳು ತೆರೆದಿದ್ದವು.







