ಮನೆಯೊಂದರಲ್ಲಿ ಒಂದೂವರೆ ತಿಂಗಳ ಮಗು ಪತ್ತೆ; ಬಾಲಮಂದಿರದ ವಶಕ್ಕೆ
ಉಪ್ಪಿನಂಗಡಿ, ನ.28: ಪುತ್ತೂರು ತಾಲೂಕಿನ ಪೆರ್ನೆಯ ಮನೆಯೊಂದರಲ್ಲಿ ಒಂದೂವರೆ ತಿಂಗಳ ಮಗು ಪತ್ತೆಯಾಗಿದ್ದು, ಈ ಬಗ್ಗೆ ಊರವರು ಪೊಲೀಸರಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ಮಗುವನ್ನು ಬಾಲಮಂದಿರಕ್ಕೆ ಒಪ್ಪಿಸಿದ್ದಾರೆ.
ಪೆರ್ನೆಯ ನಿವಾಸಿಯೋರ್ವರ ಮನೆಯಿಂದ ಮಗುವನ್ನು ವಶಕ್ಕೆ ಪಡೆಯಲಾಗಿದೆ. ಈ ಮಗು ಇವರ ಸ್ನೇಹಿತ ದಂಪತಿಯ ಮಗು ಎನ್ನಲಾಗಿದ್ದು, ಮಗುವನ್ನು ಸಲಹಲೆಂದು ಈ ಮನೆಯಲ್ಲಿ ಬಿಟ್ಟಿದ್ದರು ಎಂದು ತಿಳಿದುಬಂದಿದೆ. ಮಗುವಿನ ತಾಯಿ ನೇಪಾಳ ಮೂಲದವರಾಗಿದ್ದು, ಮಗುವನ್ನು ಬಿಟ್ಟು ನೇಪಾಳಕ್ಕೆ ತೆರಳಿದ್ದರು. ಒಂದೂವರೆ ತಿಂಗಳ ಮಗುವನ್ನು ಸಲಹಲು ಕಷ್ಟವಾದ ಕಾರಣ ಮಗುವಿನ ತಂದೆ ಮಗುವನ್ನು ತನ್ನ ಸ್ನೇಹಿತನ ವಶಕ್ಕೆ ನೀಡಿದ್ದರು ಎನ್ನಲಾಗಿದೆ.
ತಮ್ಮ ಪಕ್ಕದ ಮನೆಯಲ್ಲಿ ದಿಢೀರ್ ಮಗು ಪತ್ತೆಯಾದ ಹಿನ್ನೆಲೆಯಲ್ಲಿ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮಗುವನ್ನು ವಶಕ್ಕೆ ಪಡೆದು, ಉಪ್ಪಿನಂಗಡಿಯ ಬಾಲಮಂದಿರದ ವಶಕ್ಕೆ ನೀಡಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story