ಮೂರನೆ ಟೆಸ್ಟ್: ಆಂಗ್ಲರ ಮೇಲೆ ಭಾರತದ ಹಿಡಿತ
ಆಂಗ್ಲರನ್ನು ಕಾಡಿದ ಅಶ್ವಿನ್, ಜಯಂತ್, ಜಡೇಜ

ಮೊಹಾಲಿ, ನ.28: ಇಲ್ಲಿ ನಡೆಯುತ್ತಿರುವ ಮೂರನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ.
ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್‌ನ ಮೂರನೆ ದಿನವಾಗಿರುವ ಇಂದು ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಎರಡನೆ ಇನಿಂಗ್ಸ್‌ನಲ್ಲಿ 38 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 78 ರನ್ ಗಳಿಸಿದೆ.
ಸ್ಪಿನ್ನರ್‌ಗಳಾದ ಅಶ್ವಿನ್(19ಕ್ಕೆ 3) ಮತ್ತು ಜಯಂತ್ ಯಾದವ್(12ಕ್ಕೆ 1) ದಾಳಿಗೆ ಸಿಲುಕಿ ಇಂಗ್ಲೆಂಡ್‌ನ ಅಗ್ರ ಸರದಿಯ ದಾಂಡಿಗರು ಪೆವಿಲಿಯನ್ ಸೇರಿದ್ದಾರೆ.
ನಾಯಕ ಅಲಿಸ್ಟರ್ ಕುಕ್(12), ಎಂಎಂ ಅಲಿ (5), ಬೈರ್‌ಸ್ಟೋವ್(15) ಸ್ಟೋಕ್ಸ್ (5) ಔಟಾಗಿದ್ದಾರೆ. ಆಟ ನಿಂತಾಗ ಆರಂಭಿಕ ದಾಂಡಿಗ ಜೋ ರೂಟ್ 36 ರನ್ ಮತ್ತು ಇನ್ನೂ ಖಾತೆ ತೆರೆಯದ ನೈಟ್‌ವಾಚ್‌ಮೆನ್ ಗ್ಯಾರೆಟ್ ಬ್ಯಾಟಿ ಔಟಾಗದೆ ಕ್ರೀಸ್‌ನಲ್ಲಿದ್ದರು.
ಇದಕ್ಕೂ ಮೊದಲು ಭಾರತ ಮೊದಲ ಇನಿಂಗ್ಸ್‌ನಲ್ಲಿ 138. 2 ಓವರ್‌ಗಳಲ್ಲಿ 417 ರನ್‌ಗಳಿಗೆ ಆಲೌಟಾಗಿತ್ತು. ಇದರೊಂದಿಗೆ ಭಾರತ 134 ರನ್‌ಗಳ ಮೇಲುಗೈ ಸಾಧಿಸಿದೆ.





