ನದಿಯನ್ನು ಈಜಿ ದಾಟಲಿರುವ 5ರ ಹರೆಯದ ಬಾಲಕಿ!

ಕೊಚ್ಚಿ, ನ.28: ಕೇರಳದಲ್ಲಿ ನೀರಲ್ಲಿ ಮುಳುಗಿ ಸಾವುಗಳು ಹೆಚ್ಚಾಗುತ್ತಿರುವ ಹಿನ್ನಲೆ ನಿವೇದಿತಾ ಸುಚೀಂದ್ರನ್ ಎಂಬ 5ರ ಹರೆಯದ ಬಾಲಕಿಯೊಬ್ಬಳು ಮಂಗಳವಾರ, ಅಲುವಾ ಅದ್ವೈತ ಆಶ್ರಮದ ತೀರದಿಂದ ಅಲುವಾ ಮನಪ್ಪುರಂನ ವರೆಗೆ ಪೆರಿಯಾರ್ ನದಿಯನ್ನು ಈಜಿ ದಾಟುವ ಯೋಜನೆ ಹಾಕಿಕೊಂಡಿದೆ.
ಕೆಲವು ವರ್ಷಗಳಿಂದ ನದಿಯಲ್ಲಿ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಳ್ಳೆಯ ಈಜುಗಾರರು ನೀರಿಗೆ ಹೆದರಬೇಕಾಗಿಲ್ಲವೆಂಬ ಸಂದೇಶವನ್ನು ವಿಶ್ವಕ್ಕೆ ಸಾರಲು ಈ ಪುಟ್ಟ ಬಾಲಕಿ ಬಯಸಿದ್ದಾಳೆ.
ಪೆರಿಯಾರ್ ನದಿ ಸರಾಸರಿ 20-25 ಅಡಿ ಆಳವಿದ್ದು, ಆಕೆ. 600ಮೀ. ದೂರವನ್ನು ಈಜಲಿದ್ದಾಳೆ. ಈಜಿನ ನಡುವೆ ನಿವೇದಿತಾ ಬಿಡುವು ಪಡೆಯುವುದಿಲ್ಲ. ಒಳ ತೆರೆಗಳಿರುವ ಈ ನದಿಯನ್ನು ಈಜಿ ದಾಟುವ ಯೋಜನೆಯನ್ನು ಅವಳು ಹಾಕಿಕೊಂಡಿದ್ದಾಳೆಂದು ಬಾಲಕಿಯ ತರಬೇತುದಾರ ಸಾಜಿ ವಲಫ್ಸೆರಿಲ್ ತಿಳಿಸಿದ್ದಾರೆ.
ಮಂಜುಮ್ಮಲ್‌ನ ಗಾರ್ಡಿಯನ್ ಏಂಜಲ್ಸ್ ಪಬ್ಲಿಕ್ ಸ್ಕ್ಕೂಲ್‌ನ ಯುಕೆಜಿ ವಿದ್ಯಾರ್ಥಿನಿಯಾಗಿರುವ ನಿವೇದಿತಾಗೆ ಸಾಜಿ ಸೆಪ್ಟಂಬರ್‌ನಿಂದ ತರಬೇತಿ ನೀಡುತ್ತಿದ್ದಾರೆ.
ನದಿಯ ದಡದಲ್ಲೇ ಬದುಕುವ ಹಾಗೂ ಕೆಲಸ ಮಾಡುವ ಜನ ಇಲ್ಲಿದ್ದಾರೆ. ಆದರೂ, ಅವರಿಗೆ ಈಜು ಬರುವುದಿಲ್ಲವೆಂದು ಕಳೆದ 8 ವರ್ಷಗಳಿಂದ ಪೆರಿಯಾನ್ ನದಿಯಲ್ಲಿ ಈಜಲು ಮಕ್ಕಳಿಗೆ ಧರ್ಮಾರ್ಥ ತರಬೇತಿ ನೀಡುತ್ತಿರುವ ಸಾಜಿ ಹೇಳಿದ್ದಾರೆ.
ಅಕ್ಕ ದೇವನಂದನಾಳನ್ನು ಸಾಜಿಯವರ ತರಬೇತಿಗೆ ತಂದೆೆ ಕರೆದೊಯುತ್ತಿದ್ದ ವೇಳೆ ನಿವೇದಿತಾ ಸಹ ಹೋಗುತ್ತಿದ್ದಳು. ಆಕೆ ಸ್ವಲ್ಪ ಹೊತ್ತು ನೀರಿನಲ್ಲಿ ಕೈಕಾಲು ಆಡಿಸುತ್ತಿದ್ದಳು. ಕುಟುಂಬದವರು ನದಿಯ ಕಿನಾರೆಗೆ ಹೋದಾಗಲೆಲ್ಲ, ನಿವೇದಿತಾ ತಕ್ಷಣ ಈಜಲು ಹೋಗುತ್ತಿದ್ದಳು. ತಾನು ಸಾಜಿಯಲ್ಲಿ ಮಾತನಾಡಿ ಅವಳನ್ನು ತರಬೇತಿಗೆ ಸೇರಿಸಲು ನಿರ್ಧರಿಸಿದೆನೆಂದು ತಂದೆ ಸುಚೀಂದ್ರನ್ ಐ.ಎಸ್. ಎಂಬವರು ತಿಳಿಸಿದ್ದಾರೆ.
ನಾಳಿನ ಈಜು ಕಾರ್ಯಕ್ರಮದ ವೇಳೆ ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಕೂಬಾ ಮುಳುಗುಗಾರರು ಹಾಗೂ ಆ್ಯಂಬುಲೆನ್ಸ್ ಸೇವೆ ಸ್ಥಳದಲ್ಲಿರಲಿದೆ. ನದಿ ದಾಟುವ ವೇಳೆ ನಿವೇದಿತಾಳೊಂದಿಗೆ, ಸಾಜಿಯೂ ಇರಲಿದ್ದಾರೆ. ಕಳೆದ 12ದಿನಗಳಲ್ಲಿ ಆಕೆ, ಗಾಳಿಯನ್ನಾಧರಿಸಿ 20-25 ನಿಮಿಷಗಳಲ್ಲಿ ನದಿಯನ್ನು ಯಶಸ್ವಿಯಾಗಿ ಈಜಿ ದಾಟಿದ್ದಾಳೆಂದು ಅವರು ಹೇಳಿದ್ದಾರೆ.







