ನೋಟು ಬದಲಾವಣೆ ಯತ್ನ; ಇಬ್ಬರು ಬ್ಯಾಂಕ್ ಅಧಿಕಾರಿಗಳ ಸಹಿತ ವ್ಯಾಪಾರಿಯ ಬಂಧನ

ಮುಂಬೈ, ನ.28: ಕಾನೂನು ಬಾಹಿರವಾಗಿ ರೂ.11 ಲಕ್ಷ ವೌಲ್ಯದ ರದ್ದಾದ ನೋಟುಗಳನ್ನು ಹೊಸ ನೋಟುಗಳೊಂದಿಗೆ ಬದಲಾಯಿಸಲು ಯತ್ನಿಸಿದ ಆರೋಪದಲ್ಲಿ ಇಬ್ಬರು ಬ್ಯಾಂಕ್ ಅಧಿಕಾರಿಗಳು ಸಹಿತ ಮೂವರನ್ನು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಿಂದ ಬಂಧಿಸಲಾಗಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ. ಲಾತೂರಿನಲ್ಲಿ ಕೆಲವು ಜನರು ಅಧಿಕಾರಿಗಳೊಂದಿಗೆ ಸೇರಿ ಹಳೆಯ ನೋಟುಗಳನ್ನು ಹೊಸದರೊಂದಿಗೆ ಬದಲಾಯಿಸಲು ಯತ್ನಿಸಿದ ಮೂರನೆ ಪ್ರಕರಣ ಇದಾಗಿದೆ.
ಸಾರ್ವಜನಿಕ ವಲಯದ ಬ್ಯಾಂಕೊಂದರ ಶಾಖಾ ಪ್ರಬಂಧಕ, ಕ್ಯಾಶಿಯರ್ ಹಾಗೂ ಒಬ್ಬ ವ್ಯಾಪಾರಿಯನ್ನು ಶನಿವಾರ ಬಂಧಿಸಲಾಗಿದೆ. ಬ್ಯಾಂಕ್ ಅಧಿಕಾರಿಗಳ ಬಳಿ ಹೊಸ ನೋಟುಗಳಿದ್ದರೆ ವ್ಯಾಪಾರಿಯ ಬಳಿ ರೂ.500 ಹಾಗೂ 1000ದ ರೂ.11 ಲಕ್ಷ ವೌಲ್ಯದ ನೋಟುಗಳಿದ್ದವೆಂದು ಲಾತೂರ್‌ನ ಪೊಲೀಸ್ ಅಧೀಕ್ಷಕ ಸಂಜೀವ ರಾಥೋಡ್ ಪಿಟಿಐಗೆ ತಿಳಿಸಿದ್ದಾರೆ.
ಸುಳಿವೊಂದರ ಮೇರೆಗೆ, ರಾಜ್ಯ ಸಾರಿಗೆ ನಿಗಮದ ವಲಯ ಕಚೇರಿಯ ಹೊರಗೆ ಕಾಲುದಾರಿಯಲ್ಲಿ ನೋಟು ಬದಲಿಸುತ್ತಿದ್ದ ವೇಳೆ ಶನಿವಾರ ಬ್ಯಾಂಕ್ ಅಧಿಕಾರಿಗಳು ಹಾಗೂ ವ್ಯಾಪಾರಿಯನ್ನು ಬಂಧಿಸಲಾಯಿತು. ಬ್ಯಾಂಕ್ ಅಧಿಕಾರಿಗಳಿಂದ ರೂ.11 ಲಕ್ಷ ವೌಲ್ಯದ ರೂ. 2000 ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರು ನೋಟು ಬದಲಾವಣೆಗೆ ಶೇ.20 ಕಮಿಷನ್ ಕೇಳಿದ್ದೆರೆನ್ನಲಾಗಿದೆಯೆಂದು ಪೊಲೀಸರು ಹೇಳಿದ್ದಾರೆ.





