ಗಾಂಜಾ ಸಾಗಿಸುತ್ತಿದ್ದ ಆರೋಪಿಯ ಬಂಧನ : 8 ಕೆ.ಜಿ. ಗಾಂಜಾ ವಶ

ಮಂಗಳೂರು, ನ.28: ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಆತನಿಂದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ವಿಶಾಖಪಟ್ಟಣದ ಬಳಿಯಿಂದ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ರವಿವಾರ ಖಚಿತ ಮಾಹಿತಿಯನ್ನು ಪಡೆದ ಸಿಸಿಬಿ ಪೊಲೀಸರು ಪಂಪ್‌ವೆಲ್ ವೃತ್ತದ ಬಳಿ ಕುಂಬಳೆಯ ನಿವಾಸಿ ಇಬ್ರಾಹೀಂ (38) ಎಂಬಾತನನ್ನು ಬಂಧಿಸಿದ್ದಾರೆ. ಈತ ಗಾಂಜಾವನ್ನು ಪುತ್ತೂರು, ಸುಳ್ಯ ಕಡೆಗೆ ಮಾರಾಟ ಮಾಡಲು ತೆರಳುತ್ತಿದ್ದನೆಂದು ಹೇಳಲಾಗಿದೆ.
ಆರೋಪಿಯಿಂದ ಸುಮಾರು ಒಟ್ಟು 8 ಕೆ.ಜಿ. ಗಾಂಜಾ, ಮೊಬೈಲ್ ಫೋನ್ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಗಾಂಜಾದ ಮೌಲ್ಯ 2,01,510 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿ ಇಬ್ರಾಹೀಂ ಗಾಂಜಾವನ್ನು ವಿಶಾಖಪಟ್ಟಣದಿಂದ ಖರೀದಿ ಮಾಡಿ ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಮಾರಾಟ ಮಾಡಲು ಯತ್ನಿಸಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈತ 2014ರಲ್ಲಿ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸಿ ಬಂಧಿತನಾಗಿದ್ದ. ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ನ್ಯಾಯಾಲಯಕ್ಕೆ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದ. ಅಲ್ಲದೆ, ನ್ಯಾಯಾಲಯವು ಈತನ ವಿರುದ್ಧ ವಾರಂಟ್ ಕೂಡ ಹೊರಡಿಸಿತ್ತು.
ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಗಾಂಜಾವನ್ನು ಮುಂದಿನ ಕ್ರಮಕ್ಕಾಗಿ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಸ್ತಾಂತರಿಸಲಾಗಿದೆ.
ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಸುನೀಲ್ ವೈ. ನಾಯ್ಕ್ ಮತ್ತು ಎಸ್ಸೈ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.







