ಹೈಕೋರ್ಟ್‌ನಿಂದ ದಿಲ್ಲಿ ಪೊಲೀಸರಿಗೆ ತರಾಟೆ
ನಜೀಬ್ ಅಹ್ಮದ್ ನಾಪತ್ತೆ ಪ್ರಕರಣ

ಹೊಸದಿಲ್ಲಿ,ನ.28: ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಕುರಿತಂತೆ ದಿಲ್ಲಿ ಪೊಲೀಸರನ್ನು ಇಂದು ತೀವ್ರ ತರಾಟೆಗೆತ್ತಿಕೊಂಡ ದಿಲ್ಲಿ ಉಚ್ಚ ನ್ಯಾಯಾಲಯವು, ಎಲ್ಲ ರಾಜಕೀಯ ಅಡೆತಡೆಗಳನ್ನು ಮೀರುವಂತೆ ಮತ್ತು ಆತನನ್ನು ಪತ್ತೆ ಹಚ್ಚುವಂತೆ ತಾಕೀತು ಮಾಡಿತು. ರಾಷ್ಟ್ರ ರಾಜಧಾನಿಯ ಹೃದಯಭಾಗದಿಂದ ಯಾರಾದರೂ ಹಾಗೆಯೇ ಅದೃಶ್ಯರಾಗಲು ಸಾಧ್ಯವಿಲ್ಲ, ಹೀಗಾಗಿ ಅಹ್ಮದ್ ನಾಪತ್ತೆಯ ಹಿಂದೆ ಹೆಚ್ಚಿನದೇನೋ ಇರಬೇಕು ಎಂದು ಅದು ಹೇಳಿತು.
ಕಳೆದ 45 ದಿನಗಳಿಂದಲೂ ನಾಪತ್ತೆಯಾಗಿರುವ ಅಹ್ಮದ್ ಇರುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಜಿ.ಎಸ್.ಸಿಸ್ತಾನಿ ಮತ್ತು ವಿನೋದ ಗೋಯೆಲ್ ಅವರ ಪೀಠವು, ವಿವಿ ಕ್ಯಾಂಪಸ್‌ನಲ್ಲಿ ಅಹ್ಮದ್ ಮತ್ತು ಎಬಿವಿಪಿ ಸದಸ್ಯರ ನಡುವಿನ ಹೊಡೆದಾಟ ಮತ್ತು ಅಹ್ಮದ್ ಗಾಯಗೊಂಡಿದ್ದನ್ನು ದಿಲ್ಲಿ ಪೊಲೀಸರ ಸ್ಥಿತಿಗತಿ ವರದಿಯಲ್ಲಿ ಏಕೆ ಉಲ್ಲೇಖಿಸಿಲ್ಲ ಎನ್ನುವುದು ಸೇರಿದಂತೆ ಹಲವಾರು ಪ್ರಶ್ನೆಗಳನ್ನು ಎತ್ತಿತು.
ರಾಷ್ಟ್ರ ರಾಜಧಾನಿಯಿಂದ ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾನೆ ಮತ್ತು ಆತನನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎನ್ನುವುದು ಈ ಮಹಾನಗರದ ನಿವಾಸಿಗಳಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸುತ್ತದೆ ಎಂದ ನ್ಯಾಯಾಲಯವು, ಎಲ್ಲ ಕೋನಗಳಿಂದಲೂ ತನಿಖೆಯನ್ನು ನಡೆಸುವಂತೆ ಪೊಲೀಸರಿಗೆ ಸೂಚಿಸಿತು. ಅಹ್ಮದ್‌ನನ್ನು ಬಲವಂತದಿಂದ ಅಪಹರಿಸಲಾಗಿಲ್ಲ ಎಂದು ಪೊಲೀಸರು ತಮ್ಮ ವರದಿಯಲ್ಲಿ ತಿಳಿಸಿದ್ದರು.
ಅರ್ಜಿಯ ಪ್ರತಿಯೊಂದನ್ನು ರವಾನಿಸಿದ್ದರೂ ಅಹ್ಮದ್ ನಾಪತ್ತೆ ವಿಷಯವನ್ನು ಪರಿಶೀಲಿಸಲು ಯಾರೊಬ್ಬರನ್ನು ನಿಯುಕ್ತಿಗೊಳಿಸದ ಜೆಎನ್‌ಯು ಕುಲಪತಿಗಳ ನಿಲುವಿನ ಬಗ್ಗೆ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು.
ಅಹ್ಮದ್ ತಾಯಿ ಫಾತಿಮಾ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸುತ್ತಿದೆ.







