ವಿವಿಧೆಡೆ ಕಾಂಗ್ರೆಸ್‌ನಿಂದ ಆಕ್ರೋಶ ದಿನಾಚರಣೆ
ನೋಟು ನಿಷೇಧ ಪ್ರತಿಭಟನೆಗೆ ವಿವಿಧ ಪಕ್ಷಗಳ ಬೆಂಬಲ

ಕಪ್ಪುಹಣದ ನೆಪದಲ್ಲಿ ಜನರ ಮೇಲೆ ಸವಾರಿ: ಗಾಯತ್ರಿ ಶಾಂತೇಗೌಡ
ಚಿಕ್ಕಮಗಳೂರು, ನ.28: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನಸಾಮಾನ್ಯರ ಮೇಲೆ ಸವಾರಿ ಮಾಡುತ್ತಿದೆ. ಕಪ್ಪು ಹಣ ಹೊರ ತರುವುದಾಗಿ ಹೇಳಿ ಬಡವರನ್ನು ಬ್ಯಾಂಕುಗಳ ಎದುರು ಸಾಲುಗಟ್ಟಿ ನಿಲ್ಲುವಂತೆ ಮಾಡಿದೆ ಎಂದು ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಅವರು, ಸೋಮಾರ ಗರದ ಜಿಲ್ಲಾಧಿಕಾರಿ ಕಚೆೇರಿ ಎದುರು ಜಿಲ್ಲಾ ಕಾಂಗ್ರೆಸ್, ಸಿಪಿಐ ಮತ್ತು ಬಿಎಸ್ಪಿ ಪಕ್ಷಗಳು ಜಂಟಿಯಾಗಿ ಹಮ್ಮಿಕೊಂಡಿದ್ದ ಆಕ್ರೋಶ್ ದಿವಸ್ ಅಂಗವಾಗಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಕಪ್ಪುಹಣ ಹೊರ ತರುವುದಾಗಿ ಹೇಳಿಕೊಂಡಿರುವ ಬಿಜೆಪಿ ಸರಕಾರ ಈತನಕ ಎಷ್ಟು ಕೋಟಿ ಕಪ್ಪುಹಣವನ್ನು ವಶಪಡಿಸಿಕೊಂಡಿದೆ ಹಾಗೂ ಎಷ್ಟು ಮಂದಿಯನ್ನು ಹಿಡಿದು ಶಿಕ್ಷಿಸಲಾಗಿದೆ ಎಂದು ಬಹಿರಂಗಪಡಿಸಲಿ ಎಂದು ಸವಾಲೆಸೆದರು.
ಸಾಮಾನ್ಯ ನಾಗರಿಕರಿಗೆ ಚಿಲ್ಲರೆ ಹಣ ದಕ್ಕದಿರುವಾಗ ಬಿಜೆಪಿಗರಲ್ಲಿ ಹೊಸ ನೋಟಿನ ಕಟ್ಟುಗಳು ಕಾಣಿಸುತ್ತಿವೆ. ಕೆಲವೆಡೆ ಮದುವೆಗಳನ್ನು ನೂರಾರು ಕೋಟಿ ವ್ಯಯಿಸಿ ಾಡುತ್ತಿರುವುದು ಕಪ್ಪುಹಣ ಇರುವ ದ್ಯೋತಕ ಎಂದು ಆರೋಪಿಸಿದ ಅವರು, ಕಪ್ಪು ಹಣ ಹೊರ ತರುವುದಾದರೆ ಶ್ರೀಮಂತರ, ಕಾರ್ಪೊರೇಟ್ ಶಕ್ತಿಗಳ, ಬಂಡವಾಳಶಾಹಿಗಳ, ಶ್ರೀಮಂತ ಉದ್ಯಮಗಳನ್ನು ಬ್ಯಾಂಕಿನೆದುರು ಅಥವಾ ಜೈಲಿನೊಳಗೆ ನಿಲ್ಲಿಸಬೇಕಿತ್ತು. ಅದು ಬಿಟ್ಟು ಕಪ್ಪು ಹಣ ಕೂಡಿಟ್ಟವರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿರುವ ಸರಕಾರ ಬಡವರ ಮೇಲೆ ಸವಾರಿ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಎಸ್ಪಿ ಪಕ್ಷದ ರಾಧಾಕೃಷ್ಣ, ಜಿಲಾ ್ಲ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಮಾತನಾಡಿದರು. ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ಶ್ರೀಧರ್ ಉರಾಳ್, ನಗರಸಭೆೆ ಸದಸ್ಯರಾದ ಪುಟ್ಟಸ್ವಾಮಿ, ರೂಬೆನ್ ಮೋಸೆಸ್, ಕೆ.ಮುಹಮ್ಮದ್, ಬಿ.ಎಚ್.ಮುಹಮ್ಮದ್, ಸಿಪಿಐ ಅಮ್ಜದ್, ಶಾಂತೇಗೌಡ, ಯೂತ್ ಕಾಂಗ್ರೆಸ್ ಅಧ್ಯಕ್ಷ ಶಿವು ಮತ್ತಿತರರಿದ್ದರು.
ಶಿಕಾರಿಪುರ: ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತ
ಶಿಕಾರಿಪುರ, ನ.28: 500,1000 ರೂ ಮುಖಬೆಲೆಯ ನೋಟಗಳನ್ನು ನಿಷೇಧಿಸಿದ ಕೇಂದ್ರ ಸರಕಾರದ ವಿರುದ್ಧ ಸೋಮವಾರ ದೇಶಾದ್ಯಂತ ವಿರೋಧ ಪಕ್ಷಗಳು ನೀಡಿದ ಆಕ್ರೋಶ್ ದಿವಸ್ ಕರೆಗೆ ಪಟ್ಟಣದಲ್ಲಿ ಅಂಗಡಿ ಮುಂಗಟ್ಟ್ಟು ಹೋಟೆಲ್‌ಗಳು ವ್ಯವಹಾರ ಸ್ಥಗಿತಗೊಳಿಸಿ ಬಂದ್ ಆಚರಿಸಿದ್ದು, ಬಸ್ ಸಂಚಾರ, ಶಾಲಾ ಕಾಲೇಜು, ಸರಕಾರಿ ಕಚೇರಿಗಳು ಯಥಾಪ್ರಕಾರ ಕಾರ್ಯನಿರ್ವಹಿಸಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೇಂದ್ರದ ನೋಟು ಅಮಾನ್ಯಕ್ಕೆ ದೇಶಾದ್ಯಂತ ವಿರೋಧ ಪಕ್ಷಗಳು ಆಕ್ರೋಶ ದಿನ ಆಚರಿಸುವಂತೆ ಕರೆ ನೀಡಿದ್ದು, ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡರ ಮನವಿ ಮೇರೆಗೆ ಅಂಗಡಿ ಮುಂಗಟ್ಟು ಹೊಟೇಲ್ ಮಾಲಕರು ವ್ಯವಹಾರ ಸ್ಥಗಿತಗೊಳಿಸಿ ಬಂದ್ ಕರೆಗೆ ಸ್ಪಂದಿಸಿದರು.
ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರಕಾರದ ವಿರುದ್ಧ ಗದಾಪ್ರಹಾರ ನಡೆಸಿದರು. ಸಮೀಪದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮದ ದಿನಾಚರಣೆ ಆಚರಿಸಿ ನೆರೆದವರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು. ಅಕ್ಕಪಕ್ಕದಲ್ಲಿ ನಡೆದ ಕೇಂದ್ರದ ಪರ ವಿರೋಧ ಸಭೆಗಳಿಂದ ಘರ್ಷಣೆಯಾಗದಂತೆ ಪೊಲೀಸ್ ಸಿಬ್ಬಂದಿ ನೂರಾರು ಸಂಖ್ಯೆಯಲ್ಲಿ ಹಾಜರಿದ್ದು ಬಿಗುವಿನ ವಾತಾರವಣವನ್ನು ತಿಳಿಗೊಳಿಸಿದರು.
ಈ ಸಂದರ್ಭ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿ ಮಾಲತೇಶ, ಬಿಜೆಪಿ ರಾಜ್ಯಾಧ್ಯಕ್ಷರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ವರ್ತಕರು ಸ್ವಯಂಪ್ರೇರಿತರಾಗಿ ಬಂದ್ ಆಚರಿಸುವ ಮೂಲಕ ಸಂಸದ, ಶಾಸಕರ ವಿರುದ್ಧ ಸಡ್ಡು ಹೊಡೆದು ಸಿದ್ಧ್ದವಾಗಿದ್ದಾರೆ ಎಂದರು. ಮುಖ್ಯಮಂತ್ರಿಯಾದ ಕೂಡಲೇ ಕಳಸಾ ಬಂಡೂರಿ ಮಹಾದಾಯಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಬೊಗಳೆ ಬಿಡುತ್ತಿರುವ ಯಡಿಯೂರಪ್ಪನವರು ಈ ಹಿಂದೆ ದೊರೆತ ಅವಕಾಶದಲ್ಲಿ ಸಮಸ್ಯೆಯನ್ನು ಜೀವಂತವಾಗಿಟ್ಟ ಬಗ್ಗೆ ಪ್ರಶ್ನಿಸಿದರು.
ಜನಸಾಮಾನ್ಯರಿಗೆ ಅಚ್ಛೇದಿನ್ ಬರಲಿವೆೆ ಎಂಬ ಮೋದಿ ಮಾತು ಅಪ್ಪಟ ಸುಳ್ಳಾಗಿದ್ದು ಕೇವಲ ಕಾರ್ಪೊರೆಟ್ ದಣಿ ಅಂಬಾನಿ,ಟಾಟಾ ಮತ್ತಿತರರು ನೋಟ್ ನಿಷೇಧದ ಲಾಭ ಪಡೆದು ಲಕ್ಷಾಂತರ ಕೋಟಿ ರೂ, ಕಪ್ಪು ಹಣವನ್ನು ಬದಲಾಯಿಸಿಕೊಂಡು ಅಚ್ಛೇದಿನ್ ಪ್ರಯೋಜನವನ್ನು ಮೋದಿ ವ್ಯವಸ್ಥಿತವಾಗಿ ಮಾಡಿಕೊಟ್ಟಿದ್ದಾರೆ ಎಂದು ಟೀಕಿಸಿದರು.
ಮಡಿಕೇರಿ: ಕೇಂದ್ರ ಸರಕಾರದ ಕ್ರಮಕ್ಕೆ ಖಂಡನೆ
ಮಡಿಕೇರಿ,ನ.28: ಐನೂರು ಹಾಗೂ ಸಾವಿರ ರೂ. ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ದಿಢೀರ್ ಆಗಿ ರದ್ದುಗೊಳಿಸಿರುವ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಕ್ರಮವನ್ನು ಖಂಡಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಆಕ್ರೋಶದ ದಿನವನ್ನು ಆಚರಿಸಿತು. ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ, ಮಾಜಿ ಸಚಿವರಾದ ಸುಮಾವಸಂತ್ ಹಾಗೂ ಪಕ್ಷದ ವಿವಿಧ ಘಟಕಗಳ ಪ್ರಮುಖರ ನೇತೃತ್ವದಲ್ಲಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು ನಗರದ ಗಾಂಧಿ ಮೈದಾನದ ಬಳಿಯಿಂದ ಜಿಲ್ಲಾಧಿಕಾರಿಗಳ ಕಚೆೇರಿಗೆ ತೆರಳಿ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪೂರ್ವ ತಯಾರಿ ಇಲ್ಲದೆ ಪ್ರಧಾನಮಂತ್ರಿ ನರೇಂದ್ರಮೋದಿ ಅವರು ನೋಟುಗಳನ್ನು ರದ್ದುಗೊಳಿಸಿರುವುದು ಖಂಡನೀಯ ವೆಂದು ಅಸಮಾಧಾನ ವ್ಯಕ್ತಪಡಿಸಿದರು. ನೊಟುಗಳ ಅಮಾನ್ಯದಿಂದ ಉಂಟಾಗಿರುವ ಬಿಕ್ಕಟ್ಟನ್ನು ಸರಿಪಡಿಸುವ ನಿಟ್ಟಿನಲ್ಲಿ ರಾಷ್ಟ್ರಪತಿಗಳು ಕೇಂದ್ರ ಸರಕಾರಕ್ಕೆ ಅಗತ್ಯ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಎಂಎಲ್ಸಿ ವೀಣಾ ಅಚ್ಚಯ್ಯ, ನೋಟು ಅಮಾನ್ಯ ನಿರ್ಧಾರದಿಂದ ಭಾರತದ ಇತಿಹಾಸದಲ್ಲೆ ಕಂಡು ಕೇಳರಿಯದ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾಂಗ್ರೆಸ್ ಪಕ್ಷ 500 ಮತ್ತು 1000 ರೂ. ಮುಖ ಬೆಲೆಯ ನೋಟುಗಳ ರದ್ದತಿಯನ್ನು ವಿರೋಧಿಸುತ್ತಿರುವುದಲ್ಲ. ಬದಲಿಗೆ ಇಂತಹ ನಿರ್ಧಾರ ಕೈಗೊಳ್ಳುವ ಸಂದರ್ಭ ಸಾಧಕ ಬಾಧಕಗಳನ್ನು ಚರ್ಚಿಸದೆ ಏಕಾಏಕಿ ನಿರ್ಧಾರ ತೆಗೆದುಕೊಂಡಿರುವುದನ್ನು ವಿರೋಧಿಸುವುದಾಗಿ ತಿಳಿಸಿದರು.
ಅಗತ್ಯ ತಯಾರಿಗಳಿಲ್ಲದೆ ನೋಟುಗಳನ್ನು ಅಮಾನ್ಯ ಮಾಡಿದ್ದರಿಂದ ಜನ ಸಾಮಾನ್ಯರ ಜೀವನ ಅಲ್ಲೋಲ ಕಲ್ಲೋಲವಾಗಿದೆ. ಇಂತಹ ಪರಿಸ್ಥಿತಿಗೆ ಕಾರಣರಾದ ನರೇಂದ್ರ ಮೋದಿ ಅವರಿಗೆ ಮುಂಬರುವ ದಿನಗಳಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವೀಣಾಅಚ್ಚಯ್ಯ ಅಭಿಪ್ರಾಯಪಟ್ಟರು.
ನೋಟುಗಳ ಅಮಾನ್ಯದಿಂದ ಪ್ರಮುಖವಾಗಿ ಕಾರ್ಮಿಕರು, ದಿನಗೂಲಿ ನೌಕರರು, ಅಸಂಘಟಿತ ವಲಯದ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ, ಭಾರತ ಪ್ರಮುಖವಾಗಿ ನಗದು ಹಣವನ್ನು ಆಧರಿಸಿದ ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಇದೀಗ ನೋಟು ಅಮಾನ್ಯದಿಂದ ಗ್ರಾಮೀಣರು, ರಸ್ತೆ ಬದಿಯ ವ್ಯಾಪಾರಸ್ಥರು, ಸಣ್ಣ ವರ್ತಕರು, ಗ್ರಾಮೀಣ ಭಾಗದ ಸಹಕಾರ ಸಂಘಗಳು ಪ್ರತಿಕೂಲ ಪರಿಣಾಮವನ್ನು ಎದುರಿಸುವಂತಾಗಿದೆ.
ಕಪ್ಪುಹಣವನ್ನು ಹೊರತರುವ ಉದ್ದೇಶದಿಂದ ನೊಟುಗಳನ್ನು ಅಮಾನ್ಯ ಮಾಡಲಾಗುತ್ತಿದೆಯೆಂದು ಮೋದಿ ತಿಳಿಸಿದ್ದಾರೆ. ಆದರೆ ಕಪ್ಪು ಹಣದ ಶೇ.5 ರಿಂದ 6 ರಷ್ಟು ಮಾತ್ರ ನಗದು ರೂಪದಲ್ಲಿದ್ದು, ಉಳಿದ ಕಪ್ಪು ಹಣ , ಚಿನ್ನಾಭರಣ, ಆಸ್ತಿಯ ರೂಪದಲ್ಲಿದೆೆ. ಹೊರ ದೇಶಗಳಲ್ಲಿರುವ ಕಪ್ಪುಹಣವನ್ನು ತರುವ ಮೂಲಕ ಎಲ್ಲಾ ಬಡವರ್ಗದ ಖಾತೆಗಳಿಗೆ 15 ಲಕ್ಷ ಹಾಕುವುದಾಗಿ ತಿಳಿಸಿದ್ದರಾದರೂ ಅದು ಸಾಧ್ಯವಾಗಿಲ್ಲವೆಂದು ಮನವಿ ಪತ್ರದಲ್ಲಿ ಟೀಕಿಸಲಾಗಿದೆ.
ಪ್ರತಿಭಟನೆಯಲ್ಲಿ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಗಣೇಶ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮಾನಾಥ್ ಬಿ.ಎಸ್., ಮಡಿಕೆೇರಿ ನಗರ ಕಾಂಗ್ರೆಸ್ ಅಧ್ಯಕ್ಷ ಕೆ.ಯು. ಅಬ್ದುಲ್ ರಝಾಕ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಕೊಲ್ಯದ ಗಿರೀಶ್, ಮೈನಾ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು
.‘ಕೇಂದ್ರದ ಕ್ರಮದಿಂದ ದೇಶದಲ್ಲಿ ಅರಾಜಕತೆ’
ಶಿವಮೊಗ್ಗ, ನ. 28: ಪೂರ್ವ ಸಿದ್ಧತೆಯಿಲ್ಲದೆ 500 ಮತ್ತು 1000 ರೂ. ಮುಖಬೆಲೆಯ ಹಳೆಯ ನೋಟ್‌ಗಳ ಚಲಾವಣೆ ರದ್ದುಗೊಳಿಸಿದ ಕೇಂದ್ರ ಸರಕಾರದ ಕ್ರಮದಿಂದ ದೇಶದಲ್ಲಿ ಅರಾಜಕ ಪರಿಸ್ಥಿತಿ ಉಂಟಾಗಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷವು ಸೋಮವಾರ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿತು. ಡಿ.ಸಿ. ಕಚೇರಿ ಮುಂಭಾದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಅರ್ಪಿಸಿದರು. ನೋ ಟ್ ನಿಷೇಧ ಕ್ರಮದಿಂದ ದೇಶದ ಜನಸಾಮಾನ್ಯರು, ರೈತರು, ವ್ಯಾಪಾರಸ್ಥರು ತೀವ್ರ ತೊಂದರೆಗೊಳಗಾಗಿದ್ದಾರೆ. ಚಿಲ್ಲರೆ ಹಣಕ್ಕಾಗಿ ಪರದಾಡುವಂತಾಗಿದೆ. ದಿನ ನಿತ್ಯದ ಜೀವನ ಅಲ್ಲೋಲ ಕಲ್ಲೋಲವಾಗಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಮತ್ತೊಂದೆಡೆ ಪ್ರಧಾನಿ ಮೋದಿಯವರು ನೋಟ್ ನಿಷೇಧದ ನಂತರ ದಿನಕ್ಕೊಂದು ನಿರ್ಧಾರ ಪ್ರಕಟಿಸುತ್ತ, ನಾಗರಿಕರಿಗೆ ಮತ್ತಷ್ಟು ಸಂಕಷ್ಟವೊಡ್ಡುತ್ತಿದ್ದಾರೆ. ಜನರು ಬ್ಯಾಂಕ್ ಹಾಗೂ ಎಟಿಎಂಗಳ ಮುಂಭಾಗದಲ್ಲಿ ಸಾಲುಗಟ್ಟಿ ನಿಲ್ಲುವಂತೆ ಮಾಡಿದ್ದಾರೆ. ಇದರಿಂದ ನಾಗರಿಕರು ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬಿಟ್ಟು ಹಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಪ್ರಧಾನಿ ಮೋದಿ ಪ್ರತಿಪಕ್ಷದವರ ಪ್ರಶ್ನೆಗೆ ಉತ್ತರ ಕೊಡಲು ಸಿದ್ಧ್ದರಿಲ್ಲ. ತಾವು ತೆಗೆದುಕೊಂಡ ನಿರ್ಧಾರದಿಂದ ಜನರಿಗೆ ಎಷ್ಟು ತೊಂದರೆಯಾಗಿದೆ ಎನ್ನುವುದು ಈಗ ಅವರಿಗೆ ಗೊತ್ತಾಗಿದೆ. ಇದರಿಂದ ಪಾರಾಗಲು ವೌನಿಯಾಗಿದ್ದಾರೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. 2000 ರೂ. ನೋಟನ್ನು ಬಿಡುಗಡೆಗೊಳಿಸುವ ಮುನ್ನವೇ ಕೆಲವು ಬಿಜೆಪಿ ನಾಯಕರ ಕೈಸೇರಿರುವ ಈ ನೋಟು, ಆಪಕ್ಷದ ನಾಯಕರಿಗೆ ಕಪ್ಪು ಹಣವನ್ನು ಬಿಳಿ ಯಾಗಿಸಲು ಸರಕಾರ ನೆರವು ನೀಡಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಈ ನೋಟು ಅವರಿಗೆ ಹೇಗೆ ಸಿಕ್ಕಿತು ಎನ್ನುವ ಬಗ್ಗೆ ಪ್ರಧಾನಿ ಸ್ಪಷ್ಟಪಡಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ಪಕ್ಷದ ಮುಖಂಡ ತೀ.ನ.ಶ್ರೀನಿವಾಸ್ ವಹಿಸಿದ್ದರು. ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಆರ್.ಪ್ರಸನ್ನಕುಮಾರ್ ಮೊದಲಾದವರಿದ್ದರು.
ಶಿವಮೊಗ್ಗದಲ್ಲಿ ನಡೆಯದ ಬಂದ್
ಸೋಮವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ಶಿವಮೊಗ್ಗ ನಗರದಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಸಂಪೂರ್ಣ ನೀರಸವಾಗಿತ್ತು. ದೈನಂದಿನ ಜನಜೀವನ ಯಥಾಸ್ಥಿತಿಯಲ್ಲಿತ್ತು. ಕಾಂಗ್ರೆಸ್ ಪಕ್ಷವು ಬಂದ್ ಕರೆಯಿಂದ ಹಿಂದಕ್ಕೆ ಸರಿದು, ಪ್ರತಿಭಟನೆಗೆ ಮಾತ್ರ ತನ್ನ ಹೋರಾಟ ಸೀಮಿತಗೊಳಿಸಿತ್ತು.
ಪಕ್ಷದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು. ಉಳಿದಂತೆ ಸಿಪಿಐಎಂ ಸಂಘಟನೆ ಕೂಡ ಡಿ.ಸಿ. ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿತು. ಉಳಿದಂತೆ ಇತರ ಪ್ರತಿಪಕ್ಷಗಳು, ಸಂಘಟನೆಗಳು ಪ್ರತಿಭಟನೆಯನ್ನಾಗಲಿ ಅಥವಾ ಬಂದ್ ಬೆಂಬಲಿಸಿ ಮೆರವಣಿಗೆ ನಡೆಸಲಿಲ್ಲ. ಇದರಿಂದ ಬಂದ್ ಪ್ರಕ್ರಿಯೆ ವಿಫಲಗೊಳ್ಳಲು ಮುಖ್ಯ ಕಾರಣವಾಯಿತು. ಸರಕಾರಿ - ಖಾಸಗಿ ಬಸ್‌ಗಳು, ಆಟೊ ಸೇರಿದಂತೆ ಪ್ರಯಾಣಿಕ ಹಾಗೂ ಇತರ ಸರಕು-ಸಾಗಣೆ ವಾಹನಗಳು ಎಂದಿನಂತೆ ಸಂಚರಿಸಿದವು. ಸರಕಾರಿ ಕಚೇರಿಗಳು, ಶಾಲಾ-ಕಾಲೇಜು, ಖಾಸಗಿ ಆಫೀಸ್‌ಗಳು, ಅಂಗಡಿ-ಮುಂಗಟ್ಟುಗಳು, ಬ್ಯಾಂಕ್, ಪೆಟ್ರೋಲ್ ಬಂಕ್‌ಗಳು ಸೇರಿದಂತೆ ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಣೆ ಮಾಡಿದವು. ಪ್ರಮುಖ ರಸ್ತೆಗಳಲ್ಲಿ ಜನ - ವಾಹನ ಸಂಚಾರ ಸಾಮಾನ್ಯವಾಗಿತ್ತು.







