ಅನಾಥ ಮಗು ಮೃತ್ಯು
ಕಾರವಾರ, ನ.28: ಕಳೆದ ಕೆಲವು ದಿನದ ಹಿಂದೆ ಅಂಕೋಲಾ ತಾಲೂಕಿನ ಹಿಲ್ಲೂರು ಬಳಿ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಗು ಕಾರವಾರದ ಸಿವಿಲ್ ಆಸ್ತತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆ ಜರಗಿದೆ.
ಕಳೆದ ವಾರ ಮಗು ಪತ್ತೆಯಾಗಿದ್ದ ಸಂದರ್ಭದಲ್ಲಿ ವೈದ್ಯರು ಮಗು 7 ತಿಂಗಳಲ್ಲಿ ಜನಿಸಿದ್ದು, ಆರೈಕೆಯ ಆವಶಕ್ಯತೆ ಇದೆ ಎಂದು ಸೂಚಿಸಿದ್ದರು. ಬಳಿಕ ಮಗುವನ್ನು ಕಾರವಾರದ ಜಿಲ್ಲಾಸ್ಪತ್ರೆಯಲ್ಲಿಟ್ಟು ಆರೈಕೆ ಮಾಡಲಾಗುತ್ತಿತ್ತು. ಆದರೆ ರವಿವಾರ ಮಗುವಿನ ರಕ್ತದ ಕೊರತೆಯಿಂದ ಆರೋಗ್ಯ ಹದಗೆಟ್ಟಿತ್ತು. ಅಲ್ಲದೆ, ಮಗುವಿಗೆ ಒ+ ರಕ್ತದ ಆವಶ್ಯಕತೆ ಇದೆ ಎಂದು ತಿಳಿಸಿದ್ದರು.
ಬಳಿಕ ರಕ್ತದ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತಾದರೂ ಯಾವುದೇ ಚಿಕಿತ್ಸೆಗೆ ಮಗುವಿನ ದೇಹ ಸ್ಪಂದಿಸದೆ ಇದ್ದರಿಂದ ಮೃತಪಟ್ಟಿದೆ ಎನ್ನಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮಗುವಿಗೆ ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಕಾನೂನಾತ್ಮಕ ಕ್ರಮಕ್ಕೆ ಮಗುವಿನ ರಕ್ತದ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.





