ದ್ವಿತೀಯ ಟೆಸ್ಟ್: ಪಾಕಿಸ್ತಾನಕ್ಕೆ ಕಠಿಣ ಸವಾಲು
ರಾಸ್ ಟೇಲರ್ ಶತಕ

ಹ್ಯಾಮಿಲ್ಟನ್, ನ.28: ರಾಸ್ ಟೇಲರ್ ಬಾರಿಸಿದ ಆಕರ್ಷಕ ಅಜೇಯ ಶತಕದ ನೆರವಿನಿಂದ ನ್ಯೂಝಿಲೆಂಡ್ ತಂಡ ಪಾಕಿಸ್ತಾನ ತಂಡಕ್ಕೆ ದ್ವಿತೀಯ ಟೆಸ್ಟ್ ಪಂದ್ಯದ ಗೆಲುವಿಗೆ 369 ರನ್ ಕಠಿಣ ಗುರಿ ನೀಡಿದೆ.
ಟೇಲರ್ ಕೆಲವೇ ದಿನಗಳ ಹಿಂದೆ ಬಲಗಣ್ಣಿನ ಗಾಯಗೊಳಗಾಗಿದ್ದು, ಬುಧವಾರ ಸರ್ಜರಿಗೆ ಒಳಪಡಲಿದ್ದಾರೆ. ಎರಡನೆ ಟೆಸ್ಟ್ ಆರಂಭವಾಗುವ ಎರಡು ದಿನಗಳ ಮೊದಲು ಪಂದ್ಯದಲ್ಲಿ ಆಡಲು ಫಿಟ್ ಆಗಿದ್ದರು. ನ್ಯೂಝಿಲೆಂಡ್ ನಾಲ್ಕನೆೆ ದಿನವಾದ ಸೋಮವಾರ 5 ವಿಕೆಟ್ ನಷ್ಟಕ್ಕೆ 313 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿದೆ. ಮೂರು ಓವರ್ ಎದುರಿಸಿರುವ ಪಾಕಿಸ್ತಾನ ವಿಕೆಟ್ ನಷ್ಟವಿಲ್ಲದೆ ಕೇವಲ ಒಂದು ರನ್ ಗಳಿಸಿದೆ.
ಪ್ರವಾಸಿ ಪಾಕ್ ತಂಡ ಐದನೆ ಹಾಗೂ ಅಂತಿಮ ದಿನವಾದ ಮಂಗಳವಾರ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸಮಬಲಗೊಳಿಸಬೇಕಾದರೆ ನಾಲ್ಕನೆ ಇನಿಂಗ್ಸ್‌ನಲ್ಲಿ ದೊಡ್ಡ ಸ್ಕೋರ್ ಗಳಿಸಬೇಕಾಗಿದೆ. 2002ರಲ್ಲಿ ಆಸ್ಟ್ರೇಲಿಯ ತಂಡ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿ ಜಯಭೇರಿ ಬಾರಿಸಿತ್ತು.
ಟೇಲರ್ ಬೌಂಡರಿ ಬಾರಿಸಿ 16ನೆ ಶತಕ ಪೂರೈಸಿದ ಬೆನ್ನಿಗೆ ನ್ಯೂಝಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಇನಿಂಗ್ಸ್ ಡಿಕ್ಲೇರ್ ಮಾಡಿದರು. ಇದಕ್ಕೆ ಮೊದಲು ಕಿವೀಸ್ ಎರಡನೆ ಇನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಜೀತ್ ರಾವಲ್‌ರನ್ನು 2 ರನ್‌ಗೆ ಕಳೆದುಕೊಂಡಿತು.
ಆಗ ಟಾಮ್ ಲಥಾಮ್(80) ಹಾಗೂ ವಿಲಿಯಮ್ಸನ್(42)2ನೆ ವಿಕೆಟ್‌ಗೆ 96 ರನ್ ಜೊತೆಯಾಟ ನಡೆಸಿ ನ್ಯೂಝಿಲೆಂಡ್‌ಗೆ ಎರಡನೆ ಇನಿಂಗ್ಸ್‌ನಲ್ಲಿ ಭದ್ರಬುನಾದಿ ಹಾಕಿಕೊಟ್ಟರು. ಕಳಪೆ ಫಾರ್ಮ್‌ನಲ್ಲಿದ್ದ ಲಥಾಮ್ ಹಾಗೂ ರಾಸ್ ಟೇಲರ್ ಫಾರ್ಮ್‌ಗೆ ಮರಳುವ ಮೂಲಕ ಗಮನ ಸೆಳೆದರು. ಈ ಇಬ್ಬರು ಇತ್ತೀಚೆಗಿನ ದಕ್ಷಿಣ ಆಫ್ರಿಕ ಪ್ರವಾಸ ಹಾಗೂ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರು.
ದೃಷ್ಟಿ ಸಮಸ್ಯೆಯ ಹೊರತಾಗಿಯೂ ಇಮ್ರಾನ್ ಖಾನ್ ಎಸೆತವನ್ನು ಬೌಂಡರಿ ಗೆರೆ ದಾಟಿಸುವುದರೊಂದಿಗೆ ಟೇಲರ್ ತನ್ನ ಖಾತೆ ತೆರೆದರು. ಅಜೇಯ ಶತಕ ಬಾರಿಸಿರುವ ಟೇಲರ್ 134 ಎಸೆತಗಳಲ್ಲಿ 16 ಬೌಂಡರಿಗಳನ್ನು ಬಾರಿಸಿದರು. 21 ಎಸೆತಗಳಲ್ಲಿ 32 ರನ್ ಬಾರಿಸಿದ ಗ್ರಾಂಡ್‌ಹೊಮ್ ಅವರು ಟೇಲರ್ ಅವರೊಂದಿಗೆ 35 ರನ್ ಸೇರಿಸಿದರು. ಬಿಜೆ ವಾಟ್ಲಿಂಗ್ ಅಜೇಯ 15 ರನ್ ಗಳಿಸಿದರು.
ಪಾಕಿಸ್ತಾನದ ಪರ ಇಮ್ರಾನ್ ಖಾನ್(3-76) ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಆಮಿರ್ ಹಾಗೂ ವಹಾಬ್ ರಿಯಾಝ್ ತಲಾ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 271
ಪಾಕಿಸ್ತಾನ ಪ್ರಥಮ ಇನಿಂಗ್ಸ್: 216
ನ್ಯೂಝಿಲೆಂಡ್ ಎರಡನೆ ಇನಿಂಗ್ಸ್: 313/5 ಡಿಕ್ಲೇರ್
(ಲಥಾಮ್ 80, ಟೇಲರ್ ಅಜೇಯ 102, ಗ್ರಾಂಡ್‌ಹೊಮೆ 32, ಇಮ್ರಾನ್ ಖಾನ್ 3-76)







