ಹೃದಯಗಳನ್ನು ಕಟ್ಟುವ ಕಾರ್ಯ ಮಾಡಬೇಕು: ಮನು ಬಳಿಗಾರ್

ಬೆಳ್ತಂಗಡಿ, ನ.28: ಸಾಹಿತಿಯಾದವನು ಸಾಮಾಜಿಕ ಬದ್ಧತೆಯನ್ನು ಬೆಳೆಸಿಕೊಂಡು ಸಾಹಿತ್ಯವನ್ನು ರಚಿಸುವ ಕೆಲಸ ಮಾಡಬೇಕು. ಕನ್ನಡ ಸಾಹಿತ್ಯಕ್ಕೆ ಬುನಾದಿ ಆಗಿರುವುದು ಪಂಪನ ಕಾಲದಿಂದ ಹಿರಿದು ಬಂದ ಮಾನವೀಯ ಮೌಲ್ಯಗಳಾಗಿವೆ. ಮನುಜ ಕುಲಂ ತಾನೊಂದೇ ವಲಂ ಎಂಬ ಪಂಪನ ಆಪ್ತ ವಾಕ್ಯ ಜಗತ್ತಿಗೆ ದಾರಿ ತೋರಿಸುವಂತಾಗಿದೆ. ಸಾಹಿತ್ಯ ಮನಸ್ಸುಗಳನ್ನು ಒಡೆಯುವ ಕಾರ್ಯ ಮಾಡದೆ ಹೃದಯಗಳನ್ನು ಕಟ್ಟುವ ಕಾರ್ಯ ಮಾಡಬೇಕು ಎಂದು ಕನ್ನಡ ಸಾಹಿತ್ಯಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.
ಅವರು ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ ಸಂದರ್ಭ ಅಮೃತವರ್ಷಿಣಿ ಸಭಾಭವನದಲ್ಲಿ ಆಯೋಜಿಸಲಾಗಿದ್ದ 84ನೆ ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಬದುಕು ಮತ್ತು ಬರಹಕ್ಕೆ ಪರಸ್ಪರ ಪೂರಕವಾಗಿರಬೇಕು. ಯುವಕರು ಸಾಹಿತ್ಯದ ಬಗ್ಗೆ ಪ್ರೇಮ ಬೆಳೆಸಿಕೊಂಡು ಓದುವ ಹವ್ಯಾಸವನ್ನು ರೂಪಿಸಿಕೊಳ್ಳಬೇಕು. ಆಗ ಭಾಷೆ, ಸಂಸ್ಕೃತಿ ಬೆಳೆಯಲು ಸಾಧ್ಯವಿದೆ. ನಮ್ಮ ಮೂಲ ಕಲೆಗಳು, ಜನಪದ ಸಂಸ್ಕೃತಿ ಅಳಿವಿನ ಅಂಚಿನಲ್ಲಿದ್ದು ಅದನ್ನು ಉಳಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಾದ ಅಗತ್ಯವಿದೆ. ಶ್ರೀ ಕ್ಷೇತ್ರ ಇದರ ಬಗ್ಗೆ ಮುತುವರ್ಜಿ ವಹಿಸುತ್ತಿದೆ. ಈ ನಿಟ್ಟಿನಲ್ಲಿ ಅಕಾಡೆಮಿಗಳು, ಸರಕಾರ ಪ್ರಯತ್ನಿಸಬೇಕು ಎಂದರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಖ್ಯಾತ ಕವಿ ಹಾಗೂ ಸಾಹಿತಿ ಬೆಂಗಳೂರಿನ ಎಂ.ಎನ್. ವ್ಯಾಸರಾವ್ ಕನ್ನಡ ಸಾಹಿತ್ಯದಲ್ಲಿ ಜನಪ್ರಿಯತೆ ಮತ್ತು ಶ್ರೇಷ್ಠತೆ ನಡುವೆ ಅಂತರ ತೀರ ಕಡಿಮೆಯಾಗುತ್ತಾ ಬರುತ್ತಿದೆ. ಜನಪ್ರಿಯತೆಯೊಂದೇ ಸಾಕು ಎಂಬ ದೃಷ್ಟಿಕೋನ ಬರಹಗಾರರಲ್ಲಿ ಬೆಳೆಯುತ್ತಿದೆ. ಇದರಿಂದಾಗಿ ಸಾಹಿತ್ಯ ಮೌಲ್ಯಗಳನ್ನು ಕಳೆದುಕೊಳ್ಳವ ಅಪಾಯವಿದೆ. ಈ ಬಗ್ಗೆ ಸಾಹಿತಿಗಳು, ಓದುಗರು ಎಚ್ಚರ ವಹಿಸುವ ಅಗತ್ಯವಿದೆ ಎಂದರು.
ಸಾಹಿತ್ಯವೆಂಬುದು ಜೀವನದಿಂದ ಬೇರೆಯಲ್ಲ ಜೀವನದ ಪ್ರತಿಯೊಂದು ವಿಚಾರವನ್ನು ಸಾಹಿತ್ಯ ಒಳಗೊಂಡಿರಬೇಕು. ಕನ್ನಡ ಸಾಹಿತ್ಯದ ಇತಿಹಾಸವನ್ನು ಗಮನಿಸಿದರೆ ಅಂದಂದಿನ ಜನ ಜೀವನದ ಪ್ರತಿಯೊಂದು ಸ್ಥಿಗತಿಗಳನ್ನು ತೆರೆದಿಟ್ಟಿರುವುದನ್ನು ಕಾಣಬಹುದಾಗಿದೆ. ಜೀವನಾನುಭವ ಇಲ್ಲದ ಸಾಹಿತ್ಯ ಸಮರ್ಪಕವಾಗಲಾರದು. ಲೋಕಾನುಭವವನ್ನು ಕಾವ್ಯಾನುಭವವನ್ನಾಗಿ ಪರಿವರ್ತಿಸುವ ಕಾರ್ಯ ಸಾಹಿತ್ಯದಲ್ಲಿ ನಡೆಯಬೇಕಾಗಿದೆ. ಕರಾವಳಿ ಕರ್ನಾಟಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅನನ್ಯವಾದುದು ಎಂದರು.
ಸಮ್ಮೇಳನದಲ್ಲಿ ಖ್ಯಾತ ಬರಹಗಾರ ಬೆಂಗಳೂರಿನ ವಸುಧೇಂದ್ರ, ಸುಳ್ಯದ ಸ್ತ್ರೀ ರೋಗ ತಜ್ಞೆ ಡಾ.ವೀಣಾ, ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ ಉಪನ್ಯಾಸ ನೀಡಿದರು. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಉಪಸ್ಥಿತರಿದ್ದರು. ಸಮ್ಮೇಳನಾಧ್ಯಕ್ಷರ ಕಾವ್ಯಗಳನ್ನು ಸುಬ್ರಹ್ಮಣ್ಯ ಹಾಗೂ ಅನನ್ಯ ಹಾಡಿದರು. ಎಂ. ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.
ಸ್ವಾಗತ ಮಂಡಳಿಯ ಅಧ್ಯಕ್ಷ, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ಮಾತನಾಡಿ, ಇಂದು ನಮ್ಮ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಮಾತೃಭಾಷೆಯಾದ ಕನ್ನಡವು ಬಹುಮಹತ್ವದ ಪಾತ್ರ ವಹಿಸುತ್ತದೆ. ಮನೆಯಲ್ಲಿ ತಂದೆ-ತಾಯಿ, ಅಣ್ಣ-ತಂಗಿ ಬೆರೆತು ಮಾತೃಭಾಷೆಯಲ್ಲೇ ವ್ಯವಹರಿಸುತ್ತಾ ಬೆಳೆದಾಗ ನಾವು ವಿವಿಧ ಬಗೆಯ ಧಾರ್ಮಿಕ, ಸಾಹಿತ್ಯ, ಗಾದೆಗಳು, ಜೋಗುಳ ಹಾಡು, ಕತೆಗಳ ಸಂಸ್ಕಾರದೊಂದಿಗೆ ಬೆಳೆಯುತ್ತೇವೆ. ಇಂತಹ ಮಾತೃಭಾಷಾ ಪ್ರೇಮ ನಮ್ಮ ಮನೆಗಳಲ್ಲಿ, ಸಾಮಾಜಿಕ ಸಂಘಟನೆಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಸಾರ್ವತ್ರಿಕವಾಗಿ ಬೆಳೆಯುತ್ತದೆ ಆಗ ಉತ್ತಮ ಸಾಹಿತ್ಯ ಕೃತಿಗಳನ್ನು ರಚಿಸಬಲ್ಲ, ಉತ್ತಮ ಸಾಹಿತಿಗಳು ಹಾಗೂ ಉತ್ತಮ ಕೃತಿಗಳನ್ನು ಓದಿ ಆಸ್ವಾದಿಸಬಲ್ಲ, ಸಾಹಿತ್ಯ ಪ್ರೇಮಿಗಳ ಸಂಖ್ಯೆಯೂ ಹೆಚ್ಚಾಗುವುದರಲ್ಲಿ ಸಂದೇಹವಿಲ್ಲ ಎಂದರು.







