ಗೆಲುವಿನ ಹಾದಿಯಲ್ಲಿ ಟೀಮ್ ಇಂಡಿಯಾ
ಮೂರನೆ ಟೆಸ್ಟ್: ಆಂಗ್ಲರನ್ನು ಕಾಡಿದ ಅಶ್ವಿನ್, ಜಯಂತ್, ಜಡೇಜ

ಮೊಹಾಲಿ, ನ.28: ಇಲ್ಲಿ ನಡೆಯುತ್ತಿರುವ ಮೂರನೆ ಕ್ರಿಕೆಟ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ.
ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೆಸ್ಟ್‌ನ ಮೂರನೆ ದಿನವಾಗಿರುವ ಇಂದು ದಿನದಾಟದಂತ್ಯಕ್ಕೆ ಇಂಗ್ಲೆಂಡ್ ಎರಡನೆ ಇನಿಂಗ್ಸ್‌ನಲ್ಲಿ 38 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 78 ರನ್ ಗಳಿಸಿದೆ.
ಸ್ಪಿನ್ನರ್‌ಗಳಾದ ಅಶ್ವಿನ್(19ಕ್ಕೆ 3) ಮತ್ತು ಜಯಂತ್ ಯಾದವ್(12ಕ್ಕೆ 1) ದಾಳಿಗೆ ಸಿಲುಕಿ ಇಂಗ್ಲೆಂಡ್‌ನ ಅಗ್ರ ಸರದಿಯ ದಾಂಡಿಗರು ಪೆವಿಲಿಯನ್ ಸೇರಿದ್ದಾರೆ.
ನಾಯಕ ಅಲಿಸ್ಟರ್ ಕುಕ್(12), ಎಂಎಂ ಅಲಿ (5), ಬೈರ್‌ಸ್ಟೋವ್(15) ಸ್ಟೋಕ್ಸ್ (5) ಔಟಾಗಿದ್ದಾರೆ. ಮೂರನೆ ದಿನದ ಆಟ ನಿಂತಾಗ ಆರಂಭಿಕ ದಾಂಡಿಗ ಜೋ ರೂಟ್ 36 ರನ್ ಮತ್ತು ಇನ್ನೂ ಖಾತೆ ತೆರೆಯದ ನೈಟ್‌ವಾಚ್‌ಮೆನ್ ಗ್ಯಾರೆಟ್ ಬ್ಯಾಟಿ ಔಟಾಗದೆ ಕ್ರೀಸ್‌ನಲ್ಲಿದ್ದರು.
ಇದಕ್ಕೂ ಮೊದಲು ಭಾರತ ಮೊದಲ ಇನಿಂಗ್ಸ್‌ನಲ್ಲಿ 138. 2 ಓವರ್‌ಗಳಲ್ಲಿ 417 ರನ್‌ಗಳಿಗೆ ಆಲೌಟಾಗಿತ್ತು.
ಅಶ್ವಿನ್ ಪ್ರಹಾರ: ಭಾರತ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ 134 ರನ್‌ಗಳ ಮೇಲುಗೈ ಸಾಧಿಸಿತ್ತು. ಎರಡನೆ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ 78 ರನ್ ಗಳಿಸಿದ್ದರೂ ಸರಣಿ ಸೋಲು ತಪ್ಪಿಸಲು ಇನ್ನೂ 56 ರನ್ ಗಳಿಸಬೇಕಾಗಿದೆ.
ಮೊದಲ ಇನಿಂಗ್ಸ್‌ನಲ್ಲಿ ಭಾರತದ ವೇಗಿಗಳು ಮತ್ತು ಸ್ಪಿನ್ನರ್‌ಗಳು ಸಮಾನ ರೀತಿಯಲ್ಲಿ ಯಶಸ್ಸು ಗಳಿಸಿದ್ದರು. ಎರಡನೆ ಇನಿಂಗ್ಸ್‌ನಲ್ಲಿ ಉರುಳಿದ ನಾಲ್ಕು ವಿಕೆಟ್‌ಗಳನ್ನು ಸ್ಪಿನ್ನರ್‌ಗಳು ತಮ್ಮ ಖಾತೆಗೆ ಜಮೆ ಮಾಡಿದ್ದಾರೆ.
ಇಂಗ್ಲೆಂಡ್‌ನ ಅಗ್ರ ಸರದಿಯ ದಾಂಡಿಗರು ಪೆವಿಲಿಯನ್ ಸೇರಿದ್ದಾರೆ. ಆದರೆ ಗಾಯಗೊಂಡಿರುವ ಯುವ ಆರಂಭಿಕ ದಾಂಡಿಗ ಹಮೀದ್ ಬದಲಿಗೆ ಕುಕ್ ಜೊತೆ ಇನಿಂಗ್ಸ್ ಆರಂಭಿಸಿದ ಜೋ ರೂಟ್ ಭಾರತದ ದಾಳಿಯನ್ನು ಯಶಸ್ವಿಯಾಗಿ ಎದುರಿಸಿ ನಾಲ್ಕನೆ ದಿನಕ್ಕೆ ಬ್ಯಾಟಿಂಗ್‌ನ್ನು ಕಾಯ್ದ್ದಿರಿಸಿದ್ದಾರೆ.
ಕುಕ್ ಮತ್ತು ರೂಟ್ ಇನಿಂಗ್ಸ್ ಆರಂಭಿಸಿ 14 ಓವರ್‌ಗಳಲ್ಲಿ 27 ರನ್ ಸೇರಿಸಿದರು. 13.6ನೆ ಓವರ್‌ನಲ್ಲಿ ಕುಕ್ ಅವರು ಅಶ್ವಿನ್ ಎಸೆತವನ್ನು ಎದುರಿಸುವಲ್ಲಿ ಎಡವಿದರು. ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ನಂ.3 ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ ಎಂಎಂ ಅಲಿ ಕೇವಲ 5 ರನ್ ಗಳಿಸಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್ ಬೈರ್‌ಸ್ಟೋವ್ ಮೊದಲ ಇನಿಂಗ್ಸ್‌ನಲ್ಲಿ 89 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಅವರಿಗೆ ಶತಕ ನಿರಾಕರಿಸಿದ್ದ ಜಯಂತ್ ಯಾದವ್ ಎರಡನೆ ಇನಿಂಗ್ಸ್‌ನಲ್ಲಿ ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲು ಅವಕಾಶ ನೀಡಲಿಲ್ಲ. ಬೈರ್‌ಸ್ಟೋವ್ 15 ರನ್ ಗಳಿಸಿ ಔಟಾದರು.
ಬೆನ್ ಸ್ಟೋಕ್ಸ್ 1 ಬೌಂಡರಿ ಬಾರಿಸಿದರು. ಆದರೆ 5 ರನ್ ಗಳಿಸಿದ್ದಾಗ ಅಶ್ವಿನ್ ಅವರನ್ನು ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು.
ಶತಕ ವಂಚಿತ ಜಡೇಜ: ಭಾರತಕ್ಕೆ ಮೊದಲ ಇನಿಂಗ್ಸ್‌ನಲ್ಲಿ 417 ರನ್ ಗಳಿಸಲು ಕೊನೆಯ ಸರದಿಯ ದಾಂಡಿಗರು ದೊಡ್ಡ ಕೊಡುಗೆ ನೀಡಿದ್ದರು. ಎರಡನೆ ದಿನದಾಟದಂತ್ಯಕ್ಕೆ ಭಾರತ 84 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 271 ರನ್ ಗಳಿಸಿತ್ತು. ಭಾರತದ ಖಾತೆಗೆ 146 ರನ್‌ಗಳು ಇಂದಿನ ಆಟದಲ್ಲಿ ಸೇರ್ಪಡೆಗೊಂಡಿತು.
ರವಿವಾರ ಆಟ ನಿಂತಾಗ ಕ್ರೀಸ್‌ನಲ್ಲಿದ್ದ ಆಲ್‌ರೌಂಡರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವಿಂದ್ರ ಜಡೇಜ ಆಟ ಮುಂದುವರಿಸಿ 7ನೆ ವಿಕೆಟ್‌ಗೆ 97 ರನ್‌ಗಳ ಜೊತೆಯಾಟ ನೀಡಿದರು. ಅಶ್ವಿನ್ 113 ಎಸೆತಗಳನ್ನು ಎದುರಿಸಿ 11 ಬೌಂಡರಿಗಳಿರುವ 72 ರನ್ ಸೇರಿಸಿದರು. 42ನೆ ಟೆಸ್ಟ್‌ನಲ್ಲಿ ಅಶ್ವಿನ್ 9ನೆ ಅರ್ಧಶತಕ ದಾಖಲಿಸಿದರು.ಅಶ್ವಿನ್ ತಂಡದ ಸ್ಕೋರ್‌ನ್ನು 300ರ ಗಡಿ ದಾಟಿಸಿ ಸ್ಟೋಕ್ಸ್‌ಗೆ ವಿಕೆಟ್ ಒಪ್ಪಿಸಿದರು.
ಜಡೇಜ ಜೀವನ ಶ್ರೇಷ್ಠ ಸಾಧನೆ: ಆಲ್‌ರೌಂಡರ್ ರವೀಂದ್ರ ಜಡೇಜ ಈ ಮೊದಲು 22 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಆದರೆ ಈ ತನಕ ಅವರಿಗೆ ಶತಕ ದಾಖಲಿಸಲು ಸಾಧ್ಯವಾಗಿರಲಿಲ್ಲ. 2 ಅರ್ಧಶತಕ ದಾಖಲಿಸಿದ್ದರು. 68 ರನ್ ಗಳಿಸಿರುವುದು ಅವರ ಹಿಂದಿನ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ. ಲಾರ್ಡ್ಸ್‌ನಲ್ಲಿ 2014, ಜುಲೈ 17ರಂದು ಇಂಗ್ಲೆಂಡ್ ವಿರುದ್ಧ ಅವರು 68 ರನ್ ಗಳಿಸಿದ್ದರು.
ಇಂದು ಜಡೇಜ ಶತಕ ಗಳಿಸುವ ಹಾದಿಯಲ್ಲಿದ್ದರು. 3ನೆ ಅರ್ಧಶತಕ ದಾಖಲಿಸಿದ ಅವರು 90 ರನ್ ಗಳಿಸಿದ್ದಾಗ ರಶೀದ್ ಎಸೆತದಲ್ಲಿ ಚೆಂಡನ್ನು ಕೆಣಕಲು ಹೋಗಿ ಎಡವಟ್ಟು ಮಾಡಿಕೊಂಡರು. 90ರಲ್ಲಿ ಅವರ ಬ್ಯಾಟಿಂಗ್ ಕೊನೆಗೊಂಡಿತು. ರಶೀದ್ ಎಸೆತದಲ್ಲಿ ವೋಕ್ಸ್‌ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಔಟಾಗುವ ಮೊದಲು ಅವರು 170 ಎಸೆತಗಳನ್ನು ಎದುರಿಸಿದರು. 10 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು.
ಜಡೇಜ ಮತ್ತು ಜಯಂತ್ ಯಾದವ್ 8ನೆ ವಿಕೆಟ್‌ಗೆ ಜೊತೆಯಾಟದಲ್ಲಿ ತಂಡದ ಖಾತೆಗೆ 80 ರನ್ ಸೇರಿಸಿದರು.
ಜಯಂತ್ ಚೊಚ್ಚಲ ಅರ್ಧಶತಕ: ಎರಡನೆ ಟೆಸ್ಟ್ ಆಡುತ್ತಿರುವ ಜಯಂತ್ ಯಾದವ್ ಚೊಚ್ಚಲ ಅರ್ಧಶತಕ ದಾಖಲಿಸಿದರು. 9ನೆ ವಿಕೆಟ್‌ಗೆ ಜಯಂತ್ ಯಾದವ್ ಮತ್ತು ಉಮೇಶ್ ಯಾದವ್ ಜೊತೆಯಾಗಿ 33 ರನ್‌ಗಳನ್ನು ತಂಡದ ಖಾತೆಗೆ ಜಮೆ ಮಾಡಿದರು. ಕಳೆದ ಟೆಸ್ಟ್‌ನಲ್ಲಿ ಅವರು 62 ರನ್(35+27) ಗಳಿಸಿದ್ದರು. ಚೊಚ್ಚಲ ಅರ್ಧಶತಕ ದಾಖಲಿಸಲು ಚೊಚ್ಚಲ ಟೆಸ್ಟ್‌ನಲ್ಲಿ ಪ್ರಯತ್ನ ನಡೆಸಿದ್ದರು. ಆದರೆ ಅವರು ಆಡಿದ ಎರಡನೆ ಟೆಸ್ಟ್‌ನಲ್ಲಿ ಕನಸು ನನಸಾಗಿದೆ. 132 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದರು. ಜಯಂತ್ ಯಾದವ್ 136.6ನೆ ಓವರ್‌ನಲ್ಲಿ ಸ್ಟೋಕ್ಸ್ ಎಸೆತದಲ್ಲಿ ಅಲಿಗೆ ಕ್ಯಾಚ್ ನೀಡಿದರು. ಅವರು 55 ರನ್ (141ಎ, 5ಬೌ) ಗಳಿಸಿದರು. ಉಮೇಶ್ ಯಾದವ್ 12 ರನ್ ಗಳಿಸಿ ಔಟಾದರು. ಇದರೊಂದಿಗೆ ಭಾರತದ ಮೊದಲ ಇನಿಂಗ್ಸ್ ಮುಕ್ತಾಯಗೊಂಡಿತು. ಉಮೇಶ್ ಯಾದವ್ ಅವರ ವಿಕೆಟ್ ಉಡಾಯಿಸಿದ ಸ್ಟೋಕ್ಸ್ 73ಕ್ಕೆ 5 ವಿಕೆಟ್ ಪಡೆದರು. ಮುಹಮ್ಮದ್ ಶಮಿ ಔಟಾಗದೆ 1 ರನ್ ಗಳಿಸಿದರು. ಆದಿಲ್ ರಶೀದ್ 118ಕ್ಕೆ 4 ವಿಕೆಟ್ ತನ್ನದಾಗಿಸಿಕೊಂಡರು.
ಸ್ಕೋರ್ ವಿವರ
ಇಂಗ್ಲೆಂಡ್ ಪ್ರಥಮ ಇನಿಂಗ್ಸ್: 283
ಭಾರತ ಪ್ರಥಮ ಇನಿಂಗ್ಸ್: 417 ರನ್‌ಗೆ ಆಲೌಟ್
ಮುರಳಿ ವಿಜಯ್ ಸಿ ಬೈರ್‌ಸ್ಟೋ ಬಿ ಸ್ಟೋಕ್ಸ್ 12
ಪಾರ್ಥಿವ್ ಪಟೇಲ್ ಎಲ್ಬಿಡಬ್ಲು ರಶೀದ್ 42 ಚೇತೇಶ್ವರ ಪೂಜಾರ ಸಿ ವೋಕ್ಸ್ ಬಿ ರಶೀದ್ 51
ವಿರಾಟ್ ಕೊಹ್ಲಿ ಸಿ ಬೈರ್‌ಸ್ಟೋವ್ ಬಿ ಸ್ಟೋಕ್ಸ್ 62
ಅಜಿಂಕ್ಯ ರಹಾನೆ ಎಲ್ಬಿಡಬ್ಲು ರಶೀದ್ 00
ಕರುಣ್ ನಾಯರ್ ರನೌಟ್ 04
ಆರ್.ಅಶ್ವಿನ್ ಸಿ ಬಟ್ಲರ್ ಬಿ ಸ್ಟೋಕ್ಸ್ 72
ರವೀಂದ್ರ ಜಡೇಜ ಸಿ ವೋಕ್ಸ್ ಬಿ ರಶೀದ್ 90
ಜಯಂತ ಯಾದವ್ ಸಿ ಅಲಿ ಬಿ ಸ್ಟೋಕ್ಸ್ 55
ಉಮೇಶ್ ಯಾದವ್ ಸಿ ಬೈರ್‌ಸ್ಟೋವ್ ಬಿ ಸ್ಟೋಕ್ಸ್ 12
ಶಮಿ ಅಜೇಯ 01
ಇತರ 16
ವಿಕೆಟ್ ಪತನ: 1-39, 2-73, 3-148, 4-152, 5-156, 6-204, 7-301, 8-381, 9-414, 10-417.
ಬೌಲಿಂಗ್ ವಿವರ
ಆ್ಯಂಡರ್ಸನ್ 21-4-48-0
ವೋಕ್ಸ್ 24-7-86-0
ಮೊಯಿನ್ ಅಲಿ 13-1-33-0
ರಶೀದ್ 38-6-118-4
ಸ್ಟೋಕ್ಸ್ 26.2-5-73-5
ಬ್ಯಾಟಿ 16-0-47-0
ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್: 38 ಓವರ್‌ಗಳಲ್ಲಿ 78/4
ಅಲಿಸ್ಟರ್ ಕುಕ್ ಬಿ ಅಶ್ವಿನ್ 12
ರೂಟ್ ಅಜೇಯ 36
ಅಲಿ ಸಿ ಯಾದವ್ ಬಿ ಅಶ್ವಿನ್ 05
ಬೈರ್‌ಸ್ಟೋವ್ ಸಿ ಪಟೇಲ್ ಬಿ ಯಾದವ್ 15
ಸ್ಟೋಕ್ಸ್ ಎಲ್‌ಬಿಡಬ್ಲು ಅಶ್ವಿನ್ 05
ಬ್ಯಾಟಿ ಅಜೇಯ 00
ಇತರ 05
ವಿಕೆಟ್‌ಪತನ: 1-27, 2-39, 3-70, 4-78
ಬೌಲಿಂಗ್ ವಿವರ:
ಮುಹಮ್ಮದ್ ಶಮಿ 7-2-17-0
ಉಮೇಶ್ ಯಾದವ್ 1-0-7-0
ಆರ್.ಅಶ್ವಿನ್ 12-3-19-3
ರವೀಂದ್ರ ಜಡೇಜ 12-4-18-0
ಜಯಂತ್ ಯಾದವ್ 6-1-12-1.
ಅಂಕಿ-ಅಂಶ
1: ಭಾರತದ ಟೆಸ್ಟ್ ಇನಿಂಗ್ಸ್‌ನಲ್ಲಿ ಇದೇ ಮೊದಲ ಬಾರಿ ಕೆಳ ಕ್ರಮಾಂಕದ ಮೂವರು ಬ್ಯಾಟ್ಸ್‌ಮನ್‌ಗಳು 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಆರ್.ಅಶ್ವಿನ್,ರವೀಂದ್ರ ಜಡೇಜ ಹಾಗೂ ಜಯಂತ್ ಯಾದವ್ ಇಂಗ್ಲೆಂಡ್ ವಿರುದ್ಧ 50ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ದಾಖಲಾದ 14ನೆ ದೃಷ್ಟಾಂತವಿದು.
4: ಭಾರತ 6 ವಿಕೆಟ್‌ಗಳ ನಷ್ಟಕ್ಕೆ 200 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಬಳಿಕ 4ನೆ ಬಾರಿ 400ಕ್ಕೂ ಅಧಿಕ ಕಲೆ ಹಾಕಿದೆ. ಭಾರತ ಮೂರು ಬಾರಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದೆ. ಇಂಗ್ಲೆಂಡ್ ವಿರುದ್ಧ ಭಾರತ 3ನೆ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 204 ರನ್ ಗಳಿಸಿದ್ದಾಗ 6ನೆ ವಿಕೆಟ್ ಪತನಗೊಂಡಿತ್ತು. ಆ ಬಳಿಕ ಕೊನೆಯ 4 ವಿಕೆಟ್‌ಗಳ ಸಹಾಯದಿಂದ 417 ರನ್ ಗಳಿಸಿತು. ಭಾರತ 1988-89ರಲ್ಲಿ ಮೊದಲ ಬಾರಿ ಹ್ಯಾಮಿಲ್ಟನ್‌ನಲ್ಲಿ ನ್ಯೂಝಿಲೆಂಡ್ ವಿರುದ್ಧ 204 ರನ್‌ಗೆ 6 ವಿಕೆಟ್ ಕಳೆದುಕೊಂಡ ಬಳಿಕ ಉಳಿದ 4 ವಿಕೆಟ್‌ಗಳ ನೆರವಿನಿಂದ ಒಟ್ಟು 416 ರನ್ ಗಳಿಸಿತ್ತು.
230: ಭಾರತದ 7,8 ಹಾಗೂ 9ನೆ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ ಒಟ್ಟು 230 ರನ್ ಗಳಿಸಿದ್ದಾರೆ. ಭಾರತ ಈ ಹಿಂದೆ ಎರಡು ಬಾರಿ ಈ ಸಾಹಸ ಪ್ರದರ್ಶಿಸಿತ್ತು. 2007ರಲ್ಲಿ ಓವಲ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ 259 ರನ್ ಹಾಗೂ 2013-14ರಲ್ಲಿ ವೆಲ್ಲಿಂಗ್ಟನ್‌ನಲ್ಲಿ ನ್ಯೂಝಿಲೆಂಡ್‌ನ ವಿರುದ್ಧ 234 ರನ್ ಗಳಿಸಿತ್ತು.
24: ಕಳೆದ 10 ವರ್ಷಗಳಲ್ಲಿ ಭಾರತದ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್‌ನ ವಿರುದ್ಧ 24 ಬಾರಿ 50 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಭಾರತ ಈ ಸಾಧನೆ ಮಾಡಿರುವ ವಿಶ್ವದ ಮೊದಲ ತಂಡವಾಗಿದೆ.
02: ಕಳೆದ 30 ವರ್ಷಗಳಲ್ಲಿ ಎರಡನೆ ಬಾರಿ ಇಂಗ್ಲೆಂಡ್‌ನ ವೇಗದ ಬೌಲರ್ ಭಾರತದಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಬೆನ್ ಸ್ಟೋಕ್ಸ್ ಮೊಹಾಲಿ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ 2005-06ರಲ್ಲಿ ನಾಗ್ಪುರ ಟೆಸ್ಟ್‌ನಲ್ಲಿ ಮ್ಯಾಥ್ಯೂ ಹೊಗಾರ್ಡ್(6-57) ಈ ಸಾಧನೆ ಮಾಡಿದ್ದರು. ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೆ ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.
68: ಇಂಗ್ಲೆಂಡ್‌ನ ವಿಕೆಟ್‌ಕೀಪರ್ ಜಾನಿ ಬೈರ್‌ಸ್ಟೋವ್ ಈ ತನಕ 68 ಬ್ಯಾಟ್ಸ್‌ಮನ್‌ಗಳನ್ನು ಬಲಿ ಪಡೆದಿದ್ದಾರೆ. ಇದು ಈ ವರ್ಷದ ಟೆಸ್ಟ್‌ನಲ್ಲಿ ವಿಕೆಟ್‌ಕೀಪರ್‌ನ ಅತ್ಯುತ್ತಮ ಸಾಧನೆಯಾಗಿದೆ.
07: ಆರ್. ಅಶ್ವಿನ್ ಇಂಗ್ಲೆಂಡ್ ನಾಯಕ ಅಲಿಸ್ಟರ್ ಕುಕ್‌ರನ್ನು ಏಳನೆ ಬಾರಿ ಔಟ್ ಮಾಡಿದರು. ಪ್ರಸ್ತುತ ಸರಣಿಯಲ್ಲಿ 3ನೆ ಬಾರಿ ಈ ಸಾಧನೆ ಮಾಡಿದರು. ಕುಕ್ ಈ ಹಿಂದೆ ಅಶ್ವಿನ್ ವಿರುದ್ಧ 46.20ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದರು. ಈ ಬಾರಿ ಅವರ ಸರಾಸರಿ 20ಕ್ಕೆ ಕುಸಿದಿದೆ.







